ವೀರ ಸಿಂಹನೆ ನಾರಸಿಂಹನೆ ದಯಪಾರಾ
ವಾರನೆ, ಭಯ ನಿವಾರಣ, ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಿಸಿ ಕೀಳುವ ಬಿರಿದು ಭಯಂಕರ
ಘೋರವತಾರ ಕರಾಳವದನ ಅ-
ಘೋರ, ದುರಿತಸಂಹಾರ ಮಾಯಾಕಾರ
ಕ್ರೂರದೈತ್ಯರ ಶೋಕಕಾರಣ ಉದುಭವ
ಈರೇಳು ಭುವನ ಸಾಗರದೊಡೆಯ
ಅರೌದ್ರನಾಮ ವಿಜಯವಿಠ್ಠಲ ನರಸಿಂಗ
ವೀರರಸೋತ್ತುಂಗ ಕಾರುಣ್ಯಾಪಾಂಗ || ೧ ||
ಮಗುವಿನ ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದ ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧೆಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು - ಹೇ
ಜಗದ ವಲ್ಲಭನೇ ಸುಗುಣಾನಾದಿಗನೆ
ನಿಗಮವಂದಿತನೆ ಪೊಗಳಿದ ಭಕುತರ
ತಗಲಿ ತೊಲಗನೆಂದು ಮಿಗೆ ಕೂಗುತ್ತಿರಲು
ಯುಗಯುಗದೊಳು ದಯಾಳುಗಳ ದೇವರದೇವ
ಯುಗಾದಿಕೃತನಾಮಾ ವಿಜಯವಿಠ್ಠಲ ಹೋ ಹೋ
ಯುಗಳ ಕರವ ಮುಗಿದು ಮಗುವು ಮೊರೆಯಿಡಲು || ೨ ||
ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ್ನ
ಮೌಳಿ ವೇಗದಲಿ ಪಾಲಿಸುವೆನೆಂದು
ತಾಳಿ ಸಂತೋಷವ ತೂಳಿ ತುಂಬಿದಂತೆ
ಮೂಲೋಕದ ಪತಿ ವಾಲಯದಿಂದ ಸು
ಶೀಲ ದುರ್ಲಭನಾಮ ವಿಜಯವಿಠ್ಠಲ ಪಂಚ
ಮೌಳಿ ಮಾನವ ಕಂಭಸೀಳಿ ಮೂಡಿದ ದೇವ || ೩ ||
ಲಟಲಟಾ ಲಟಲಟಾ ಲಟಕಟಿಸಿ ವನಜಜಾಂಡ
ಕಟಹ ಪಟಪಟ ಪುಟುತ್ಕಟದಿ ಬಿಚ್ಚುತಲಿರಲು
ಪುಟಪುಟಾ ಪುಟನೆಗೆದು ಚೀರಿ ಹಾರುತ್ತ ಪ-
ಲ್ಕಟ ಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ
ದಿಟ ನಿಟಿಲನೇತ್ರ ಸುರಕಟಕ ಪರಿಪಾಲಾ || ೪ ||
ಬೊಬ್ಬಿರಿಯೇ ವೀರಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಚೋಣಿ ಉರಿ ಹೊಗರೆದ್ದು ಸುತ್ತೆ
ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ
ಅಬ್ಧಿಸಪುತ ಉಕ್ಕಿ ಹೊರಚೆಲ್ಲಿ ಬರುತಿರೆ
ಅಬುಜಭವಾದಿಗಳು ತಬ್ಬಿಬ್ಬುಗೊಂಡಾರಿ
ಅಬ್ಬರವೇನೆನುತ ನಭದ ಗೂಳೆಯು ತಗಿಯೇ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಝರ್ಝರಿಸಲು
ಒಬ್ಬರಿಗೊಶವಲ್ಲದ ನಮ್ಮ ವಿಜಯವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ || ೫ ||
ಘುಡಿಘುಡಿಸುತ ಕೋಟಿಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡೆಯ ಮೇಲಿರಿಸಿ ಹೇರೊಡಲ ಕೂರುಗುರದಿಂದ
ಪಡುವಲಗಡಲ ತಡಿಯ ತರಣಿಯ ನೋಡಿ
ಕಡುಕೋಪದಲಿ ಸದೆಬಡಿದು ರಕ್ಕಸನ
ಕೆಡಹಿ ನಿಡಿಗರುಳನು ಕೊರ
ಳಡಿಯಲ್ಲಿ ಧರಿಸಿದ ಸಡಗರದ ದೈವ
ಕಡುಗಲಿ ಭೂರ್ಭೂವ ವಿಜಯವಿಠ್ಠಲ ಪಾ-
ಲ್ಗಡಲೊಡೆಯಾ ಶರಣರ ವಡೆವೆ ವಡನೊಡನೆ || ೬ ||
ಉರಿಮಸೆಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಟಿ ಹರಸುರರು ಸಿರಿದೇವಿಗೆ ಮೊರೆಯಿಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೊರೆ ಉತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದೆ
ಪರದೈವ ಗಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ || ೭ ||
ಪ್ರಹ್ಲಾದವರದ ಪ್ರಪನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ || ೮ ||
vIra siMhane nArasiMhane dayapArA
vArane, Baya nivAraNa, nirguNa
sAridavara saMsAra vRukShada mUla
bErarisi kILuva biridu BayaMkara
GOravatAra karALavadana a-
GOra, duritasaMhAra mAyAkAra
krUradaityara SOkakAraNa uduBava
IrELu Buvana sAgaradoDeya
araudranAma vijayaviThThala narasiMga
vIrarasOttuMga kAruNyaapAMga || 1 ||
maguvina rakkasanu hagaliruLu biDade
hageyiMdali hoyda nagapannaga vanadhi
gagana migilAda agaNita bAdheyali
negedu ogadu sAvu bagedu kollutiralu - hE
jagada vallaBanE suguNAnAdigane
nigamavaMditane pogaLida Bakutara
tagali tolaganeMdu mige kUguttiralu
yugayugadoLu dayALugaLa dEvaradEva
yugAdikRutanAmA vijayaviThThala hO hO
yugaLa karava mugidu maguvu moreyiDalu || 2 ||
kELidAkShaNadali lAlisi Baktanna
mauLi vEgadali pAlisuveneMdu
tALi saMtOShava tULi tuMbidaMte
mUlOkada pati vAlayadiMda su
sheela durlaBanAma vijayaviThThala paMca
mauLi mAnava kaMBasILi mUDida dEva || 3 ||
laTalaTA laTalaTA laTakaTisi vanajajAMDa
kaTaha paTapaTa puTutkaTadi biccutaliralu
puTapuTA puTanegedu cIri hArutta pa-
lkaTa kaTA kaTa kaDidu rOShadiMda
miTi miTi miTane raktAkShiyalli nODi
taTitkOTi UrBaTage aarBaTavAgiralu
kuTila rahita vyakta vijayaviThThala Sakta
diTa niTilanEtra surakaTaka paripAlA || 4 ||
bobbiriyE vIradhvaniyiMda tanigiDi
habbi muMcONi uri hogareddu sutte
ubbasa ravigAge abja naDugutire
abdhisaputa ukki horacelli barutire
abujaBavAdigaLu tabbibbugoMDAri
abbaravEnenuta naBada gULeyu tagiyE
Sabda tuMbitu avyAkRutAkASa pariyaMta
nibbara tarugiri JarJarisalu
obbarigoSavallada namma vijayaviThThala
ibbageyAgi kaMBadiMda poramaTTA || 5 ||
GuDiGuDisuta kOTisiDilu girige baMdu
hoDedaMte cIri bobbiDutali laMGisi
hiDidu rakkasanna keDahi maDuhi tuDuki
toDeya mElirisi hEroDala kUruguradiMda
paDuvalagaDala taDiya taraNiya nODi
kaDukOpadali sadebaDidu rakkasana
keDahi niDigaruLanu kora
LaDiyalli dharisida saDagarada daiva
kaDugali BUrBUva vijayaviThThala paa-
lgaDaloDeyA SaraNara vaDeve vaDanoDane || 6 ||
urimasege caturdaSa dharaNi tallaNisalu
paramEShTi harasuraru siridEvige moreyiDalu
karuNadiMdali tanna SaraNanna sahita ninna
caraNakke eragalu parama SAMtanAgi
harahide dayavannu suraru kusuma varuSha
gariyalu BEri vAdya more uttarare enuta
paripari vAlaga vistAradiMda kaikoLLutta
meredu surarupadra harisi bAlakana kAyde
paradaiva gaBIrAtma vijayaviThThala nimma
carite duShTarige BIkaravO sajjana pAla || 7 ||
prahlAdavarada prapanna klESaBaMjanna
mahahaviShe vijayaviThThala naramRugavEShA || 8 ||