ನೆನೆವೆನನುದಿನ ನೀಲನೀರದವರ್ಣನ ಗುಣರನ್ನನ
ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ || ಪ. ||
ದೇವಕೀ ಜಠರೋದಯಾಂಬುಧಿಚಂದ್ರನ ಗುಣಸಾಂದ್ರನ
ಗೋವ್ರಜಕೆ ಘನ ಯಮುನೆ ದಾಟಿ ಬಂದನ ಅಲ್ಲಿ ನಿಂದನ
ಮಾವ ಕಳುಹಿದ ಮಾಯಶಠವಿಯ ಕೊಂದನ ಚಿದಾನಂದನ
ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ || ೧ ||
ಗೋಕುಲದ ಗೋಪಿಯರ ವಂಚಕ ಚೋರನ ಬಹು ಧೀರನ ಅ-
ನೇಕ ನಾರಿಯರ್ವಸನವನು ಕದ್ದೊಯ್ದನ ಪುರಗಾಯ್ದನ
ನಾಕಿಯರಿಗರಿ ಧೇನುಕ ವತ್ಸವಿಘಾತನ ವಿಖ್ಯಾತನ
ಕಾಕುಮತಿ ಕಾಳಿಂಗನ ಫಣ ತುಳಿದನ ಆವಗೊಲಿದನ || ೨ ||
ಶೈಲವನು ಅಹಿಶಯನ ಬೆರಳಲಿ ಆಂತನ ಬಲವಂತನ
ಸೋಳಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನ
ಬಾಲೆ ಭಾಮಿನಿರೊಡನೆ ಜಲಕ್ರೀಡೆಗಿಳಿದನ ಅಲ್ಲಿ ನಲಿದನ
ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ || ೩ ||
ಕ್ರೂರ ಬಕ ಕೇಶಿಗಳನೆಲ್ಲರ ಸೀಳ್ದನ ಸುರರಾಳ್ದನ
ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನ
ನಾರಿ ಕುಬುಜೆಗೆ ಭೂರಿಸಂತಸವಿತ್ತನ ಅತಿಶಕ್ತನ
ವಾರಣವನು ಕೆಡಹಿದ ಅಪ್ರತಿಮಲ್ಲನ ಅತಿಚೆಲ್ವನ || ೪ ||
ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆಮೆರೆದನ
ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ ಜಯವಂತನ
ಖಳಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನ
ಬಲದಿ ತಾಯ್ತಂದೆಯರ ಬಂಧನ ಕಡಿದನ ಯಶ ಪಡೆದನ || ೫ ||
ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ಶ್ರೇಷ್ಠನ
ಯುವತಿಯರಿಗ್ ಉದ್ಧವನ ಕಳುಹಿದ ಜಾಣನ ಸುಪ್ರವೀಣನ
ವಿವಿಧ ವಿದ್ಯಾ ಕಲೆಗಳೆಲ್ಲವ ಅರಿತನ ಶುಭಚರಿತನ
ಜವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ || ೬ ||
ಕುಮತಿ ಖಳ ಮಾಗಧನ ಯುದ್ಧದಿ ಗೆದ್ದನ
ಅನವದ್ಯನ ದ್ಯುಮಣಿಸಮ ದ್ವಾರಕೆಯ ರಚಿಸಿದುದಾರನ
ಗಂಭೀರನ ಸುಮತಿ ಮುಚುಕುಂದನೊದ್ದ
ಯವನನ ಸುಟ್ಟನ ಅತಿದಿಟ್ಟನ
ವಿಮಲ ಸುಚರಿತ್ರಾಷ್ಟಮಹಿಷಿಯರಾಳ್ದನ ನೆರೆಬಾಳ್ದನ || ೭ ||
ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನ
ಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನ
ದುರುಳ ಶಿಶುಪಾಲಾದಿ ದೈತ್ಯರ ತರಿದನ ಬಹು ಶೂರನ
ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ || ೮ ||
ಇಂತು ಸಲಹುವ ಇಳೆಯ ಸುಜನರ ಕಾಂತನ ಸಿರಿವಂತನ
ಪಂಥವುಳ್ಳ ಪ್ರಸನ್ನ ಶ್ರೀ ಹಯವದನನ ಮುನಿಮಾನ್ಯನ
ಸಂತಸದೊಳೀ ಸಾರ ಕತೆಯನು ಕೇಳ್ವರ ನೆರೆ ಬಾಳ್ವರ
ಕಂತುಪಿತ ಕಾರುಣ್ಯದಿಂದಲಿ ಪೊರೆವನು ಸುಖಗರೆವನು || ೯ ||
nenevenanudina nIlanIradavarNana guNarannana
munijanapriya muddu uDupina raMgana dayApAMgana || pa. ||
dEvakI jaTharOdayAMbudhicaMdrana guNasAMdrana
gOvrajake Gana yamune dATi baMdana alli niMdana
mAva kaLuhida mAyaSaThaviya koMdana cidAnaMdana
dEvaripu daityEMdra SakaTana oddana Srutisiddhana || 1 ||
gOkulada gOpiyara vaMchaka chOrana bahu dhIrana a-
nEka nAriyarvasanavanu kaddoydana puragAydana
nAkiyarigari dhEnuka vatsaviGAtana viKyAtana
kAkumati kALiMgana PaNa tuLidana Avagolidana || 2 ||
Sailavanu ahiSayana beraLali AMtana balavaMtana
sOLasAsira bAleyara kara piDidana sudheguDidana
bAle BAminiroDane jalakrIDegiLidana alli nalidana
lIleyali lalaneyarigiShTava koTTana saMtuShTana || 3 ||
krUra baka kESigaLanellara sILdana surarALdana
akrUra kareyalu haruShadiMdali baMdana suravaMdyana
nAri kubujege BUrisaMtasavittana atiSaktana
vAraNavanu keDahida apratimallana aticelvana || 4 ||
sulaBadiMdali Sivana dhanuvanu muridana neremeredana
maleta mallara keDahi raMgadi niMtana jayavaMtana
KaLakulAgraNi kaMsaneMbana hoDedana huDigeDedana
baladi tAytaMdeyara baMdhana kaDidana yasha paDedana || 5 ||
Buvana paTTavanugrasEnage koTTana ati shrEShThana
yuvatiyarig uddhavana kaLuhida jANana supravINana
vividha vidyA kalegaLellava aritana SuBacaritana
javana SikShisi dvijana kaMdana taMdana AnaMdana || 6 ||
kumati KaLa mAgadhana yuddhadi geddana
anavadyana dyumaNisama dvArakeya racisidudArana
gaMBIrana sumati mucukuMdanodda
yavanana suTTana atidiTTana
vimala sucaritrAShTamahiShiyarALdana nerebALdana || 7 ||
muranaraka muKyaranu cakradi taridana karivaradana
surataruva satigAgi taMda samarthana jagatkartana
duruLa SiSupAlAdi daityara taridana bahu SUrana
kurukulake layavitta pAMDavaprIyana kavigEyana || 8 ||
iMtu salahuva iLeya sujanara kAMtana sirivaMtana
paMthavuLLa prasanna shrI hayavadanana munimAnyana
saMtasadoLI sAra kateyanu kELvara nere bALvara
kaMtupita kAruNyadiMdali porevanu suKagarevanu || 9 ||