ನಡೆದು ಬಾರಯ್ಯ ನೀನು| ನಡೆದು ಬಾರಯ್ಯ ಭವ ಕಡಲಿಗೆ ಕುಂಭ ಸಂಭವ| ಪ |
ಸಡಗರದಿಂದ ಮೆಲ್ಲಡಿಯನಿಡುತ ಬೇಗ| ಎಡಬಲದಲಿ ನಿನ್ನ ಮಡದಿಯರೊಪ್ಪುತ
ತಡಮಾಡದೆ ಬಾ ಮೃಡಸಖ ವೇಂಕಟ ||ಅಪ||
ವಿಜಯದಶಮಿ ಆಶ್ವೀಜ ಮಾಸ ಶುದ್ಧದಲ್ಲಿ ನಿಜರಥಾರೂಢನಾಗಿ ಸುಜನರಿಂದೊಡಗೂಡಿ|
ಗಜಸಿಂಹ ಮಯೂರ ದ್ವಿಜಸಿಂಹ ಸಾರಂಗ| ಮಝ ಬಾಪುರೆ ಎನಲು| ತ್ರಿಜಗವು ತಲೆದೂಗೆ
ಅಜನು ಸ್ತುತಿಯ ಮಾಡೆ| ದ್ವಿಜಗಣಾಧಿಪ ಪಾಡೆ| ಗಜಮುಖನಯ್ಯನು ನಿಜಾನಂದದೊಳಾಡೆ|
ಭುಜಗ ಶ್ರೇಷ್ಠರು ದ್ವಿಜರಾಜರು ಜಯವೆನ್ನೆ ಕುಜನರೆದೆಯ ಮೆಟ್ಟಿ ರಜತಮ ಕಳೆಯುತ ||೧||
ದಕ್ಷಿಣದಿಕ್ಕಿನಲ್ಲಿ ರಾಕ್ಷಸರೆದುರಾಗಿ| ಅಕ್ಷೋಣಿ ಬಲ ನಿನ್ನುಪೇಕ್ಷೆ ಮಾಡುತಲಿರೆ|
ಪಕ್ಷಿವಾಹನನೆ ನೀನಾಕ್ಷಣದಲಿ ಖಳರ ಶಿಕ್ಷಿಸಿ ಸುಜನರ ರಕ್ಷಿಸಿ ಪೊರೆದಯ್ಯ|
ತಕ್ಷಕ ಸುತ ಸಹಸ್ರಾಕ್ಷನ ಮಗನನು ಭಕ್ಷಿಸೆ ಬರುತಿರೆ ಈಕ್ಷಿಸಿ ರಥವನು|
ತಕ್ಷಣ ನೆಲಕ್ಕೊತ್ತಿ ಮೋಕ್ಷವ ಗೈಸಿದೆ ಕುಕ್ಷಿಯೊಳಗೆ ಜಗದ್ರಕ್ಷಿಪ ವಿಶ್ವ ||೨||
ಅಂಬುಜಾಕ್ಷನೆ ಬಾರೋ ಅಂಬುಜ ವದನನೆ ಅಂಬುಜಾಲಯಪತಿ ಅಂಬುಜನಾಭನೆ|
ಅಂಬುಜ ಭವ ಜನಕ ಅಂಬುಜಾರಿಧರ| ಅಂಬುಜನಿವಾಸ ಅಂಬುಜ ಮಿತ್ರತೇಜ|
ಕೊಂಬು ಕಹಳೆಗಳು ಭೋಂ ಭೋಂ ಇಡುತಿರೆ ತುಂಬುರು ನಾರದರಿಂಬಾಗಿ ಪಾಡಲು
ಅಂಬರದಲಿ ವಾದ್ಯ ತುಂಬಿ ಧಣಿದರೆನೆ ಸಂಭ್ರಮದಲಿ ಬಾರೋ ಶಂಭು ವಂದಿತನೆ ||೩||
ಮನಕೆ ಬಾರಯ್ಯ ಸುಧಾಮನ ಸಖ ಹರಿಯೆ| ಸೊಮ್ಮಾನ ಧರಿಸಿದ ಮನಕುಮುದಕೆ ಚಂದ್ರಮನೆ
ಕೇಳೋ ಎನ್ನ ಮಾತ ದುಮ್ಮಾನ ಪರಿಹರಿಸಿ ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೋ ಎನ್ನ|
ಮನ ನಿನ್ನದು ಹೇ ಮನಸಿಜ ಜನಕನೆ ಸುಮನಸರೊಡೆಯನೆ ಬೊಮ್ಮನ ಪಿತನೆ
ಸುಮ್ಮನೆ ತಡವೇಕೆ ನಿಮ್ಮನೆಯವರೊಡನೆ ಹಿಮ್ಮನೆ ಮಾಡದೆ ಬಾ ವೆಂಕಟ ||೪||
ಪರಿಪರಿಯಿಂದಲಿ ಕರವ ಮುಗಿದು ನಿನ್ನ ಕರೆದರೆ ಬಾರದ ಗರುವು ತನವು ಏಕೋ|
ಕರಿಯ ಮೊರೆಯ ಕೇಳಿ ಸಿರಿಗೆ ಹೇಳದೆ ಬಂದೆ ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೋ|
ಶರಣಾಗತ ರಕ್ಷಾಮಣಿ ಎನ್ನುವ ಬಿರುದು ಬೇಕಾದರೆ ಸರಸರ ಬಾರಯ್ಯ
ಗರುಡಗಮನ ಗೋಪಾಲ ವಿಠಲ ರಾಯ ಕರುವಿನ ಮೊರೆಗಾವ್ ನೆರೆದಂತೆ ಪೊರೆಯಲು ||೫||
naDedu bArayya nInu| naDedu bArayya Bava kaDalige kuMBa saMBava| pa |
saDagaradiMda mellaDiyaniDuta bEga| eDabaladali ninna maDadiyaropputa
taDamADade bA mRuDasaKa vEMkaTa ||apa||
vijayadaSami ASvIja mAsa Suddhadalli nijarathArUDhanAgi sujanariMdoDagUDi|
gajasiMha mayUra dvijasiMha sAraMga| majha bApure enalu| trijagavu taledUge
ajanu stutiya mADe| dvijagaNAdhipa pADe| gajamuKanayyanu nijAnaMdadoLADe|
Bujaga SrEShTharu dvijarAjaru jayavenne kujanaredeya meTTi rajatama kaLeyuta ||1||
dakShiNadikkinalli rAkShasaredurAgi| akShONi bala ninnupEkShe mADutalire|
pakShivAhanane nInAkShaNadali KaLara SikShisi sujanara rakShisi poredayya|
takShaka suta sahasrAkShana magananu BakShise barutire IkShisi rathavanu|
takShaNa nelakkotti mOkShava gaiside kukShiyoLage jagadrakShipa viSva ||2||
aMbujAkShane bArO aMbuja vadanane aMbujAlayapati aMbujanABane|
aMbuja Bava janaka aMbujAridhara| aMbujanivAsa aMbuja mitratEja|
koMbu kahaLegaLu BOM BOM iDutire tuMburu nAradariMbAgi pADalu
aMbaradali vAdya tuMbi dhaNidarene saMBramadali bArO SaMBu vaMditane ||3||
manake bArayya sudhAmana saKa hariye| sommAna dharisida manakumudake caMdramane
kELO enna mAta dummAna pariharisi ommana koDu ahigiri timmane kELO enna|
mana ninnadu hE manasija janakane sumanasaroDeyane bommana pitane
summane taDavEke nimmaneyavaroDane himmane mADade bA veMkaTa ||4||
paripariyiMdali karava mugidu ninna karedare bArada garuvu tanavu EkO|
kariya moreya kELi sirige hELade baMde karirAja avaninna hiriyappana maganEnO|
SaraNAgata rakShAmaNi ennuva birudu bEkAdare sarasara bArayya
garuDagamana gOpAla viThala rAya karuvina moregAv neredaMte poreyalu ||5||