ಕೋತಿಯಾದರೆ ಬಿಡೆನೋ ಬಲುಪರಿ
ಭೂತಳದೊಳು ಪಾರ‍್ಯಾಡಲು ಬಿಡೆನೊ
ಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊ
ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ
ಭೀತಿ ಬೀರಲು ಬಿಡೆನೊ ಮಾತು
ಮಾತಿಗೆ ಹಲ್ಲು ತೋರಲು ಬಿಡೆನೊ
ಗಾತುರ ಗಗನಕ್ಕೆ ಬೆಳೆಸಲು ಬಿಡೆನೊ
ಕೋತಿ ಸೇವಿಸಲು ಬಿಡೆನೊ
ಆತುರದಲಿ ವನಧಿ ಲಂಘಿಸಿದರೆ ಬಿಡೆ
ಆ ತರುಗಳ ಕಿತ್ತಲು ಬಿಡೆನೊ
ವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆ
ಜಾತಿ ಧರ್ಮವ ಬಿಟ್ಟರೆ ಬಿಡೆನೊ
ಈ ತೆರದಲಿ ನೀನು ಇದ್ದರೇನಯ್ಯಾ ಬೆ -
ನ್ನಾತು ಕೇಳುವುದು ನಾ ಬಿಡಬಲ್ಲೆನೇ
ತಾತಾ ಇನ್ನಿದರಿಂದ ಆವುದಾದರು ಬರಲಿ
ದಾತಾ ಮತ್ತಿದರಿಂದ ಏನಾದರಾಗಲಿ
ಸೋತು ಹಿಂದೆಗೆದು ಪೋದರೆ ನಿನ್ನ ಪದದಾಣೆ
ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ -
ದ್ಯೋತ ಮಂಡಲ ಪೋಗಲು ಬಿಡೆನೊ
ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ
ಗೋತ್ರದವರಿಗೆ ಗತಿ ಎಲ್ಲದೋ
ವಾತನ್ನ ಮಗ ಆತನ್ನ ರೂಪವ
ಗಾತುರದಲ್ಲಿ ನಿನ್ನೊಳಗೆ ತೋರೋ
ಜೋತಿರ್ಮಯ ರೂಪ ವಿಜಯವಿಠ್ಠಲರೇಯನ
ದೂತ ದುರ್ಜನಹಾರಿ ದುಃಖನಿವಾರಿ || ೧ ||
ಮಟ್ಟತಾಳ
ಭೂತಳದೊಳಗಿದ್ದ ಭೂಮಿಸುತ್ತಲು ಬಿಡೆ
ಭೀತಿನಾಮವನ್ನು ಇಟ್ಟುಕೊಂಡರೆ ಬಿಡೆ
ನೀ ತಿರಿದುಂಡರೆ ಬಿಡೆನೋ ಬಿಡೆನೊ ಆ -
ರಾತಿಗಳಿಗೆ ಸೋತು ಅಡವಿ ಸೇರಲು ಬಿಡೆನೊ
ಸೋತುಮತನ ಬಿಟ್ಟು ಅಡಗಿ ಮಾಡಲು ಬಿಡೆ
ಘಾತಕ ನೀನಾಗಿ ಕುಲವ ಕೊಂದರೆ ಬಿಡೆ
ಮಾತುಗಾರಿಕೆಯಿಂದ ಯತಿಯಾದರೆ ಬಿಡೆನೊ
ಪ್ರೀತ ಸಲಹೊ ಎನ್ನ ಸಾಕದಿದ್ದರೆ ನಿನ್ನ
ಪೂತರೆ ದ್ವಿತಿಯೇಶನೆಂದು ಪೊಗಳಲ್ಯಾಕೆ
ಶ್ರೀನಾಥನಲ್ಲಿ ನಿನ್ನ ಮಂತ್ರಿತನವೇನೊ
ಪೋತಭಾವ ನಮ್ಮ ವಿಜಯವಿಠ್ಠಲರೇಯನಾ
ಆತುಮದೊಳಗಿಟ್ಟ ಭಾರತಿ ರಮಣಾ || ೨ ||
ತ್ರಿವಿಡಿತಾಳ
ಭಾರವೇ ನಾನೊಬ್ಬ ಶರಣಾ ನಿನಗಲ್ಲವೇ
ಬಾರಿಬಾರಿಗೆ ನಿನ್ನ ಅಹಿಕ ಸೌಖ್ಯ
ಮೀರದೆ ಕೊಡು ಎಂದು ಬೇಡಿ ಬ್ಯಾಸರಿಸು ವಿ -
ಸ್ತಾರವಾಗಿ ಗುರುವೆ ಕಾಡಿದೇನೇ
ಧಾರುಣಿಯೊಳು ಪುಟ್ಟಿ ಪಾರುಗಾಣದ ಸಂ -
ಸಾರ ಹೇಯವೆಂದು ಕೇಳಿ ನಿನಗೆ
ದೂರಿದೆನೊ ಇದು ದೈನ್ಯದಿಂದಲಿ ವಿ -
ಚಾರಿಸಿದರೊಳಿತೆ ಇಲ್ಲದಿದ್ದರೆ ಲೇಸೆ
ಸಾರಿಸಾರಿಗೆ ನಿನ್ನ ಸೌಭಾಗ್ಯ ಚರಣವ
ತೋರಿಸಿ ಧನ್ಯನ್ನ ಮಾಡೆಂದೆನೊ
ಕಾರುಣ್ಯದಲಿ ಕೈಟಭಾರಿ ಪ್ರಿಯನೆ
ಆರನ್ನ ಕಾಣೆನೊ ನಿನ್ನ ವಿನಾ
ಕೀರುತಿ ಅಪಕೀರ್ತಿ ನಿನ್ನದಯ್ಯಾ
ವಾರಣಾವರ ವಂದ್ಯ ವಿಜಯವಿಠ್ಠಲರೇಯನ
ಸೇರುವ ಪರಿಮಾಡೋ ತಾರತಮ್ಯ ಭಾವದಲಿ || ೩ ||
ಅಟ್ಟತಾಳ
ನೀನು ಒಲಿಯೇ ಹರಿ ತಾನೆ ಒಲಿವನಯ್ಯಾ
ನೀನು ಮುನಿದಡೆ ಹರಿ ತಾನೇ ಮುನಿವನು
ಏನೆಂಬೆ ನಿನ್ನ ಮೇಲಣ ಹರಿ ಕಾರುಣ್ಯ
ನೀನಲ್ಲದಿಲ್ಲದ ಸ್ಥಾನದಿ ತಾನಿಲ್ಲಾ
ಪ್ರಾಣೇಶ ನಮೋ ನಮೋ ನಿನ್ನ ಪಾದಾಬ್ಜಕೆ
ವಾನರೇಶ ಸುಗ್ರೀವ ವಾಲಿ ಸಾಕ್ಷಿ
ಜ್ಞಾನೇಶ ಭಕ್ತಿ ವಿರಕ್ತೇಶ ಅಮರೇಶ
ಆನಂದ ಆನಂದ ಮೂರುತಿ ಗುರುರಾಯ
ಪಾಣಿಗ್ರಹಣ ಮಾಡು ಪತಿತಪಾವನ ದೇವ
ಪ್ರಾಣೇಂದ್ರಿಯಗಳು ದೇಹ ಚೇತನ ಚಿತ್ತವ -
ಧ್ಯಾನ ಮಾಡಲಿ ಸರ್ವ ನಿನ್ನಾಧೀನವೆಂದು
ನೀನಿರೆಲಾವಾಗ ಅನ್ಯ ಜನರಿಗೆ ಮತ್ತಾನು
ಬಿನ್ನೈಪೆನೆ ದೇಹ ತ್ಯಾಗವಾಗಿ
ಶ್ರೀನಾಥ ವಿಜಯವಿಠ್ಠಲರೇಯನ ಪಾದ -
ರೇಣು ಧರಿಸುವ ಸರ್ವರುದ್ಧಾರೀ || ೪ ||
ಆದಿತಾಳ
ಎಲ್ಲ ಕಾಲದಲ್ಲಿ ನಿನ್ನಲ್ಲಿ ಭಕ್ತಿ ಇಪ್ಪ
ಸಲ್ಲಲಿತ ಮನುಜರ ಪದಪಾಂಸ ಶಿರ -
ದಲ್ಲಿ ಧರಿಸುವಂತೆ ಸಂತತ ಮತಿ ಇತ್ತು
ಬಲ್ಲಿದ ಕಾಮ ಬಿಡಿಸು ಬಲವಂತ ಗುಣವಂತ
ಬಲ್ಲವ ಭವದೂರ ನೀನೇ ಗತಿಯೋ ಜಗ -
ದೊಲ್ಲಭ ಮುಂದಣ ವಾಣೀಶ ಸುಖಪೂರ್ಣ
ಅಲ್ಲದಿದ್ದರೆ ಎನ್ನ ಕಾವ ಕರುಣಿಯ ಕಾಣೆ
ಮಲ್ಲಮರ್ದನ ನಮ್ಮ ವಿಜಯವಿಠ್ಠಲರೇಯನ
ನಿಲ್ಲಿಸಿ ಮನದಲ್ಲಿ ಪ್ರತಿಕೂಲವಾಗದೆ || ೫ ||
ಜತೆ
ಅನಂತ ಜನುಮಕ್ಕೆ ನೀನೆ ಗುರು ಎಂಬ
ಜ್ಞಾನವೇ ಕೊಡು ಜೀಯಾ ವಿಜಯವಿಠ್ಠಲ ದಾಸಾ || ೬ ||
kOtiyAdare biDenO balupari
BUtaLadoLu pAr^yADalu biDeno
KyAti toredu kaccuTahAkalu biDeno
cAtura biTTare biDeno nA biDeno
BIti bIralu biDeno mAtu
mAtige hallu tOralu biDeno
gAtura gaganakke beLesalu biDeno
kOti sEvisalu biDeno
Aturadali vanadhi laMGisidare biDe
A tarugaLa kittalu biDeno
vItihOtrana bAladalli iTTare biDe
jAti dharmava biTTare biDeno
I teradali nInu iddarEnayyA be -
nnAtu kELuvudu nA biDaballenE
tAtA innidariMda AvudAdaru barali
dAtA mattidariMda EnAdarAgali
sOtu hiMdegedu pOdare ninna padadANe
yAtakke saMSayavo biDeno biDeno Ka -
dyOta maMDala pOgalu biDeno
mAtu poLLAdare nUroMdu kula enna
gOtradavarige gati elladO
vAtanna maga Atanna rUpava
gAturadalli ninnoLage tOrO
jOtirmaya rUpa vijayaviThThalarEyana
dUta durjanahAri duHKanivAri || 1 ||
maTTatALa
BUtaLadoLagidda BUmisuttalu biDe
BItinAmavannu iTTukoMDare biDe
nI tiriduMDare biDenO biDeno A -
rAtigaLige sOtu aDavi sEralu biDeno
sOtumatana biTTu aDagi mADalu biDe
GAtaka nInAgi kulava koMdare biDe
mAtugArikeyiMda yatiyAdare biDeno
prIta salaho enna sAkadiddare ninna
pUtare dvitiyESaneMdu pogaLalyAke
shrInAthanalli ninna maMtritanavEno
pOtaBAva namma vijayaviThThalarEyanA
AtumadoLagiTTa BArati ramaNA || 2 ||
triviDitALa
BAravE nAnobba SaraNA ninagallavE
bAribArige ninna ahika sauKya
mIrade koDu eMdu bEDi byAsarisu vi -
stAravAgi guruve kADidEnE
dhAruNiyoLu puTTi pArugANada saM -
sAra hEyaveMdu kELi ninage
dUrideno idu dainyadiMdali vi -
cArisidaroLite illadiddare lEse
sArisArige ninna sauBAgya caraNava
tOrisi dhanyanna mADeMdeno
kAruNyadali kaiTaBAri priyane
Aranna kANeno ninna vinA
kIruti apakIrti ninnadayyA
vAraNAvara vaMdya vijayaviThThalarEyana
sEruva parimADO tAratamya BAvadali || 3 ||
aTTatALa
nInu oliyE hari tAne olivanayyA
nInu munidaDe hari tAnE munivanu
EneMbe ninna mElaNa hari kAruNya
nInalladillada sthAnadi tAnillA
prANESa namO namO ninna pAdAbjake
vAnarESa sugrIva vAli sAkShi
j~jAnESa Bakti viraktESa amarESa
AnaMda AnaMda mUruti gururAya
pANigrahaNa mADu patitapAvana dEva
prANEMdriyagaLu dEha cEtana cittava -
dhyAna mADali sarva ninnAdhInaveMdu
nInirelAvAga anya janarige mattAnu
binnaipene dEha tyAgavAgi
SrInAtha vijayaviThThalarEyana pAda -
rENu dharisuva sarvaruddhArI || 4 ||
AditALa
ella kAladalli ninnalli Bakti ippa
sallalita manujara padapAMsa Sira -
dalli dharisuvaMte saMtata mati ittu
ballida kAma biDisu balavaMta guNavaMta
ballava BavadUra nInE gatiyO jaga -
dollaBa muMdaNa vANISa suKapUrNa
alladiddare enna kAva karuNiya kANe
mallamardana namma vijayaviThThalarEyana
nillisi manadalli pratikUlavAgade || 5 ||
jate
anaMta janumakke nIne guru eMba
j~jAnavE koDu jIyA vijayaviThThala dAsA || 6 ||