ಸಂತೈಸು ತವದಾಸನೆಂದೆನ್ನನೂ ||ಪ||
ಸ್ವಾಂತದಲಿ ನೆಲೆಸಿ ಏಕಾಂತ ಭಕ್ತೋತ್ತಮನೆ ||ಅಪ||
ವಾಗೀಶ ಮುನಿಕರಾಂಬುಜದಿಂದ ಸಂಭವಿಸಿ
ಆಗಮೋಕ್ತಾರ್ಥಗಳ ಶಿಷ್ಯರಾದ
ಭಾಗವತ ಜನರಿಗುಲ್ಹಾಸದಲಿ ಬಿಡದೆ
ಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು ಸುರತರುವೇ ||೧||
ಮೋದತೀರ್ಥಾರ್ಯರ ಸುವಂಶಾಂಬುನಿಧಿ ಚಂದ್ರ
ಸಾಧಿಸುವೆ ದುಃಶಾಸ್ತ್ರಗಳನೆ ಮುರಿದು
ವಾದದಿಂದಲಿ ಸಕಲ ಮೇದಿನಿಯೊಳಿಪ್ಪ ದು-
ರ್ವಾದಿಗಳ ಭಂಗಿಸಿದ ಮಾಧವನ ಪ್ರಿಯ ಪಾಹಿ ||೨||
ಕಲಿಕೃತಾಚರಣೆಗಳು ಬಲಿಯಲ್ಹರಿ ಆಜ್ಞದಿಂ
ದಿಳೆಯೊಳವತರಿಸಿ ಸಜ್ಜನರಿಗೆಲ್ಲಾ
ತಿಳುಹಿ ಪರತತ್ವವನು ಶಾಸ್ತ್ರಮುಖದಿಂದ ಯತಿ
ಕುಲತಿಲಕ ನಂಬಿದವರಿಗೆ ನಿತ್ಯ ಸುರಧೇನು ||೩||
ಪಾದಚಾರಿಗಳಾಗಿ ತೀರ್ಥಯಾತ್ರೆಗಳ ಸ-
ಮೋದದಲಿ ಚರಿಸುತ್ತ ಚಮತ್ಕೃತಿಯಲೀ
ಸಾಧು ಸಮ್ಮತವಾದ ತೀರ್ಥಪ್ರಬಂಧವನು
ಆದರದಿ ರಚಿಸಿದ ಮಹಾ ದಯಾಂಬುಧಿಯೆ ||೪||
ಕ್ಷೋಭಕಾಲದಲಿ ಸಂಚರಿಸುತಿರಲು ಅ-
ಹೋಬಲದಿ ನೈವೇದ್ಯ ಕಲಹದಿಂದ
ಕ್ಷೋಭಿಗರ ಮಿಶ್ರಿತಾನ್ನವನ್ನುಂಡು ಕರಗಿಸಿದೆ ಭಾವಿ
ಶ್ರೀಭಾರತಿರಮಣನಂತೆ ಹರಿಯ ಕರುಣದಲಿ ||೫||
ಚಂದ್ರಿಕಾಚಾರ್ಯರಲಿ ಶಿಷ್ಯರಿಂದಲಿ ಚರಿಸಿ ಆ-
ನಂದದಲಿ ವ್ಯಾಸಪ್ರತೀಕವನ್ನು
ತಂದು ನಿರ್ಭಯದಿ ಸರ್ವತ್ರದಲಿ ಮೆರೆದೆ ಯೋ-
ಗೀಂದ್ರ ದಂಡಕಾಷಾಯ ಧರಿಸಿದ ಗುರುವೆ ||೬||
ಅಂಕದಲ್ಲಿಪ್ಪ ಬಾಲಕ ಬರುತಲೆ ಕಂಡು
ಶಂಖಚಕ್ರಾಂಕಿತನು ಈತನೆಂದು
ಶಂಕಿಸದೆ ಎನಗೆ ಪ್ರಾಗ್ಜನಮದಲಿ ಪೇಳ್ದೆ ಅಕ-
ಳಂಕ ಸನ್ಮಹಿಮ ಹಯಮುಖನ ದಾಸಾಗ್ರಣಿಯೇ ||೭||
ಮಾರಪಿತ ನೀರಜಾಸನ ತೀವ್ರಗಮನ ಪ-
ದ್ಮಾರಿ ಮೌಳಿಗಳಿಂದ ಸಹಿತರಾಗಿ
ಸಾರಶ್ವೇತದೊಳಿಪ್ಪ ತೆರನಂತೆ
ಧೀರವೃಂದಾವನದಿ ತೋರುವೆ ನಿರಂತರದಿ ||೮||
ಸನ್ಮಹಿಮ ವೇಣುಗೋಪಾಲವಿಟ್ಠಲ ಯದುವ-
ರೇಣ್ಯನ ಕೃಪಾಪಾತ್ರನೆಂದೆನಿಸುವ
ಘನ್ನಋಜುಗಣದೊಳಗೆ ಮಾನ್ಯನಾಗಿಹ ಸುಪ್ರ-
ಸನ್ನ ದ್ವಿಜಕುಲರನ್ನ ನಂಬಿದೆನೋ ನಿನ್ನ ||೯||
saMtaisu tavadaasaneMdennanU ||pa||
swaaMtadali nelesi EkaaMta bhaktOttamane ||apa||
vaagIsha munikaraaMbujadiMda saMbhavisi
aagamOktaarthagaLa shiShyaraada
bhaagavata janarigulhaasadali biDade
chennaagi vyaakhyaanavanu pELdaguru surataruvE ||1||
mOdatIrthaaryara suvaMshaaMbunidhi chaMdra
saadhisuve duHshaastragaLane muridu
vaadadiMdali sakala mEdiniyoLippa du-
rvaadigaLa bhaMgisida maadhavana priya paahi ||2||
kalikRutaacharaNegaLu baliyalhari aaj~jadiM
diLeyoLavatarisi sajjanarigellaa
tiLuhi paratatwavanu shaastramukhadiMda yati
kulatilaka naMbidavarige nitya suradhEnu ||3||
paadachaarigaLaagi tIrthayaatregaLa sa-
mOdadali charisutta chamatkRutiyalI
saadhu sammatavaada tIrthaprabaMdhavanu
aadaradi rachisida mahaa dayaaMbudhiye ||4||
kShObhakaaladali saMcharisutiralu a-
hObaladi naivEdya kalahadiMda
kShObhigara mishritaannavannuMDu karagiside bhaavi
shrIbhaaratiramaNanaMte hariya karuNadali ||5||
chaMdrikaachaaryarali shiShyariMdali charisi aa-
naMdadali vyaasapratIkavannu
taMdu nirbhayadi sarvatradali merede yO-
gIMdra daMDakaaShaaya dharisida guruve ||6||
aMkadallippa baalaka barutale kaMDu
shaMkhachakraaMkitanu ItaneMdu
shaMkisade enage praagjanamadali pELde aka-
LaMka sanmahima hayamukhana daasaagraNiyE ||7||
maarapita nIrajaasana tIvragamana pa-
dmaari mouLigaLiMda sahitaraagi
saarashwEtadoLippa teranaMte
dhIravRuMdaavanadi tOruve niraMtaradi ||8||
sanmahima vENugOpaalaviTThala yaduva-
rENyana kRupaapaatraneMdenisuva
ghannaRujugaNadoLage maanyanaagiha supra-
sanna dwijakularanna naMbidenO ninna ||9||