ವಿಜಯ ರಾಯರ ಕವಚ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ ||ಪ||
ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ||ಪ||
ದಾಸರಾಯನಾ ದಯವ ಸೂಸಿ ಪಡೆದನಾ,
ದೋಷರಹಿತನಾ, ಸಂತೋಷ ಭರಿತನಾ ||೧||
ಜ್ಞಾನವಂತನಾ ಬಲು ನಿಧಾನಿ ಶಾಂತನಾ,
ಮಾನವಂತನಾ ಮಹವದಾನ್ಯವಂತನಾ ||೨||
ಹರಿಯ ಭಜಿಸುವಾ ನರಹರಿಯ ಯಜಿಸುವಾ
ದುರಿತ ತ್ಯಜಿಸುವಾ ಜನಕೆ ಹರುಷ ಸುರಿಸುವಾ ||೩||
ಮೋದ ಭರಿತನಾ ಪಂಚಬೇಧವರಿತನಾ
ಸಾಧು ಚರಿತನಾ ಮನ ವಿಷಾದ ಮರೆತನಾ ||೪||
ಇವರ ನಂಬಿದಾ ಜನಕೆ ಭಯವಿದೆಂಬುದೂ,
ಹವಣವಾಗದೋ ನಮ್ಮವರ ಮತವಿದೂ ||೫||
ಪಾಪ ಕೋಟಿಯ ರಾಶಿ ಲೇಪವಾಗದೋ,
ತಾಪ ಕಳೆವನೂ ಬಲು ದಯಾಪಯೋನಿಧಿ ||೬||
ಕವನ ರೂಪದಿ ಹರಿಯ ಸ್ತವನ ಮಾಡಿದ
ಭುವನ ಬೇಡಿದ, ಮಾಧವನ ನೋಡಿದ ||೭||
ರಂಗನೆಂದನಾ ಭವವು ಹಿಂಗಿತೆಂದನಾ,
ಮಂಗಳಾಂಗನಾ, ಅಂತರಂಗವರಿತನಾ ||೮||
ಕಾಶಿ ನಗರದಲ್ಲಿದ್ದ ವ್ಯಾಸದೇವನಾ
ದಯವ ಸೂಸಿ ಪಡೆದನಾ ಉಲ್ಲಾಸತನದಲಿ ||೯||
ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ
ಶಾಂತಗುರುಗಳಾ ಪಾದವಾಂತು ನಂಬಿರೋ ||೧೦||
ಖೇದವಾಗದೋ ನಿಮಗೆ ಮೋದವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ ||೧೧||
ತಾಪ ತಡೆವನೋ ಬಂದ ಪಾಪ ಕಡಿವನೂ
ಶ್ರೀಪತಿಯ ಪದ ಸಮೀಪವಿಡುವನು ||೧೨||
ಗಂಗೆ ಮಿಂದರೇ ಮಲವು ಹಿಂಗಿತಲ್ಲವೆ,
ರಂಗನೊಲಿಯನೋ ಭಕ್ತರ ಸಂಗ ದೊರಕದೆ ||೧೩||
ವೇದ ಓದಲು ಬರಿದೆ ವಾದ ಮಾಡಲು,
ಹಾದಿಯಾಗದೊ ಬುಧರ ಪಾದ ನಂಬದೆ ||೧೪||
ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೇ ಲೇಶ ಭಕ್ತಿ ದೊರಕದೋ ||೧೫||
ದಾನ ಮಾಡಲು ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೂ ಇವರಧೀನವಾಗದೇ ||೧೬||
ಇಷ್ಟಿ ಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||೧೭||
ಪೂಜೆ ಮಾಡಲು ಕಂಡ ಗೋಜು ಬೀಳಲೂ
ಬೀಜ ಮಾತಿನ ಫಲ ಸಹಾಜ ದೊರಕದು ||೧೮||
ಸುರರು ಎಲ್ಲರೂ ಇವರ ಕರವ ಪಿಡಿವರೂ,
ತರಳರಂದದೀ ಹಿಂದೆ ತಿರುಗುತಿಪ್ಪರೂ ||೧೯||
ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತಾ
ಅಹೋರಾತ್ರಿಲೀ ಸುಖದ ನಿವಹ ಕೊಡುವುವು ||೨೦||
ವ್ಯಾಧಿ ಬಾರದೋ ದೇಹ ಬಾಧೆ ತಟ್ಟದೂ,
ಆದಿ ದೇವನಾ ಸುಪ್ರಸಾದವಾಹುದೋ ||೨೧||
ಪತಿತ ಪಾಮರ ಮಂದಮತಿಯು ನಾ ಬಲೂ
ಸ್ತುತಿಸಲಾಪೆನೇ ಇವರ ಅತಿಶಯಂಗಳಾ ||೨೨||
ಕರುಣದಿಂದಲೇ ಎಮ್ಮ ಪೊರೆವನಲ್ಲದೇ,
ದುರಿತ ಕೋಟಿಯಾ ಬೇಗ ತರಿವ ದಯದಲೀ ||೨೩||
ಮಂದಮತಿಗಳೂ ಇವರ ಚಂದವರಿಯದೇ
ನಿಂದಿಸುವರೋ ಭವದ ಬಂಧ ತಪ್ಪದು ||೨೪||
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದ ವಚನವಾ ಜನಕೆ ತಂದು ಕೊಡುವನೂ ||೨೫||
ಉದಯಕಾಲದೀ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ ||೨೬||
ಸಟೆಯಿದಲ್ಲವೋ ವ್ಯಾಸವಿಠಲ ಬಲ್ಲನೋ,
ಪಠಿಸಬಹುದಿದೂ ಕೇಳಿ ಕುಟಿಲ ರಹಿತರೂ ||೨೭||
Vijayarayara Kavacha
smarisi badukirO divya caraNakeragirO ||pa||
durita taridu poreva vijaya gurugaLeMbarA ||pa||
dAsarAyanA dayava sUsi paDedanA,
dOSharahitanA, saMtOSha BaritanA ||1||
j~jAnavaMtanA balu nidhAni SAMtanA,
mAnavaMtanA mahavadAnyavaMtanA ||2||
hariya BajisuvA narahariya yajisuvA
durita tyajisuvA janake haruSha surisuvA ||3||
mOda BaritanA paMcabEdhavaritanA
sAdhu caritanA mana viShaada maretanA ||4||
ivara naMbidA janake bhayavideMbudU,
havaNavAgadO nammavara matavidU ||5||
pApa kOTiya rASi lEpavAgadO,
tApa kaLevanU balu dayApayOnidhi ||6||
kavana rUpadi hariya stavana mADida
Buvana bEDida, mAdhavana nODida ||7||
raMganeMdanA Bavavu hiMgiteMdanA,
maMgaLAMganA, aMtaraMgavaritanA ||8||
kASi nagaradallidda vyAsadEvanA
dayava sUsi paDedanA ullAsatanadali ||9||
ciMte byADirO niSciMtarAgirO
SAMtagurugaLA pAdavaaMtu naMbirO ||10||
KEdavAgadO nimage mOdavAhudO
AdidEvanA suprasAda vAhudO ||11||
tApa taDevanO baMda pApa kaDivanU
SrIpatiya pada samIpaviDuvanu ||12||
gaMge miMdarE malavu hiMgitallave,
raMganoliyanO Baktara saMga dorakade ||13||
vEda Odalu baride vAda mADalu,
hAdiyaagado budhara pAda naMbade ||14||
lekkavilladA dESa tukki baMdarU
duHKavalladE lESa Bakti dorakadO ||15||
dAna mADalu divyagAna pADalU
j~jAna doreyadU ivaradhInavAgadE ||16||
iShTi yAtake kaMDa kaShTavyaatake
diTTa gurugaLa pAda muTTi BajisirO ||17||
pUje mADalu kaMDa gOju bILalU
bIja mAtina Pala sahAja dorakadu ||18||
suraru ellarU ivara karava piDivarU,
taraLaraMdadI hiMde tirugutipparU ||19||
grahagaLellavU ivarge sahAya mADutA
ahOrAtrilI suKada nivaha koDuvuvu ||20||
vyAdhi bAradO dEha bAdhe taTTadU,
Adi dEvanA suprasAdavAhudO ||21||
patita pAmara maMdamatiyu nA balU
stutisalApenE ivara atiSayaMgaLA ||22||
karuNadiMdalE emma porevanalladE,
durita kOTiyA bEga tariva dayadalI ||23||
maMdamatigaLU ivara caMdavariyadE
niMdisuvarO Bavada baMdha tappadu ||24||
iMdirApati ivara muMde kuNivanO
aMda vacanavA janake taMdu koDuvanU ||25||
udayakAladI I padava paThisalU
madaDanAdarU j~jAna udayavAhudO ||26||
saTeyidallavO vyAsaviThala ballanO,
paThisabahudidU kELi kuTila rahitarU ||27||