ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೋ || ಪ ||
ನಾಳೆಯನ್ನಬೇಡಿ ಇದೇ ವೇಳೆ ಬನ್ನಿರೋ || ಅಪ ||
ವಾಸವಾದಿವಿನುತ ವೈಕುಂಠದೊಡೆಯ
ನಮ್ಮ ಹೃದಯವಾಸನೆಂದು ಬಿಡದೇ ಕೇಶವನ್ನ ನೆನೆಯಿರೋ || ೧ ||
ಹೇಯ ಸಂಸಾರದ ಮರ್ಮ ಘಾಯವದು ಮಾಯುವಂತೆ
ಬಾಯಿ ಮುಚ್ಚಿಕೊಳ್ಳದೆ ನಾರಾಯಣನನ್ನ ನೆನೆಯಿರೋ || ೨ ||
ಬೋಧೆಗಳಲ್ಲಿ ಸದ್ಗುರು ಬೋಧೆಯಿದು ಎಂದೆನ್ನುತ
ಗಾದೆಗಳೆಲ್ಲನು ಬಿಟ್ಟು ಮಾಧವನ್ನ ನೆನೆಯಿರೋ || ೩ ||
ಇಂದಿನ ದಿನವೇ ಸುದಿನ ಇಂದಿನ ಸೊಲ್ಲೇ ಲೇಸೆಂದು
ಇಂದಿರಾರಮಣ ಗೋವಿಂದನನ್ನ ನೆನೆಯಿರೋ || ೪ ||
ಘನ್ನ ದೇವರ್ಕಳಿಗಿನ್ನು ಘನ್ನ ಮಹಿಮನು ಹರಿ
ಅನ್ಯವಿಲ್ಲವೆಂದು ಶ್ರೀ ವಿಷ್ಣುವನ್ನು ನೆನೆಯಿರೋ || ೫ ||
ಸಾಧನೆಯ ಭಕ್ತಿಯೊಳು ಶೋಧನೆಗೈಯುತ್ತ ಕಂಡೆ
ವೀಧನವೆನುತ ಮಧುಸೂದನನ್ನ ನೆನೆಯಿರೋ || ೬ ||
ಶಕ್ರನಿಗೆ ಒಲಿದು ಜಗಚಕ್ರವನ್ನು ಅಳೆದು ಮತ್ತೆ
ಶುಕ್ರಶಿಷ್ಯನ ಗೆಲಿದ ತ್ರಿವಿಕ್ರಮನ ನೆನೆಯಿರೋ || ೭ ||
ಒಮ್ಮೆ ನೆನೆಯಲು ಭಕ್ತಿ ಒಮ್ಮೆ ನೆನೆಯಲು ಮುಕ್ತಿ
ಒಮ್ಮನಪೂರ್ವಕದಿಂದ ವಾಮನನ್ನ ನೆನೆಯಿರೋ || ೮ ||
ಈ ಧರೆರಮಣನೇ ನಮ್ಮ ಆಧಾರ ದೊರೆಯು ಬೇರೆ
ಆಧಾರವ ಕಾಣೆನೆಂದು ಶ್ರೀಧರನ್ನ ನೆನೆಯಿರೋ || ೯ ||
ಕಾಸಿಗೆ ಕೈ ಚಾಚುವಂಥ ಆಶಾಪಾಶವನ್ನು ತೊರೆದು
ಕಾಶಿವಾಸ ವಿನುತ ಹೃಷೀಕೇಶನನ್ನ ನೆನೆಯಿರೋ || ೧೦ ||
ಈ ಭವ ತಿಮಿರಕೆ ಕೋಟಿ ವಿಭಾವಸು ಸಂಕಾಶ
ಶೋಭಾನಕಾರ ಪದ್ಮನಾಭನನ್ನ ನೆನೆಯಿರೋ || ೧೧ ||
ಈ ದುರಾಚಾರಗಿರಿ ಬಿದುರುವೆಂದರಿತು ಸನು
ಮೋದದಿಂದ ಮನದಿ ದಾಮೋದರನ್ನ ನೆನೆಯಿರೋ || ೧೨ ||
ಪುರುಷನಾಗಿ ಹುಟ್ಟಿ ನೂರು ವರುಷ ಬದುಕಿದುದಕೆ ಫಲವ
ಹರುಷದಿಂದ ಪಡೆಯೆ ಸಂಕರುಷಣನ್ನ ನೆನೆಯಿರೋ || ೧೩ ||
ಇವನೇ ಸರ್ವ ಶರಣ್ಯ ಇವನೇ ಲೋಕಕ್ಕೆ ಮಾನ್ಯ
ದೇವ ದೇವೋತ್ತಮ ವಾಸುದೇವನನ್ನ ನೆನೆಯಿರೋ || ೧೪ ||
ವಿದ್ಯೆ ಬೇಕು ಬುದ್ಧಿ ಬೇಕು ಸಿದ್ಧಿ ಬೇಕು ಎಂಬುವರು
ಪ್ರದ್ಯುಮ್ನಾ ಪ್ರದ್ಯುಮ್ನ ಪ್ರದ್ಯುಮ್ನನೆಂದು ನೆನೆಯಿರೋ || ೧೫ ||
ಕದ್ದು ಹುಸಿಯನಾಡಿ ಅಪರ ಬುದ್ಧಿಯಿಂದ ಕೆಡಲಿ ಬೇಡಿ
ಬುದ್ಧಿವಂತರಾಗಿ ಅನಿರುದ್ಧನನ್ನ ನೆನೆಯಿರೋ || ೧೬ ||
ನಿತ್ಯನೇಮ ಎಂಬೋದಿಲ್ಲ ಮತ್ತೆ ದಾನ ಧರ್ಮವಿಲ್ಲ
ವ್ಯರ್ಥವಾಗಿ ಕೆಡದೆ ಪುರುಷೋತ್ತಮನ್ನ ನೆನೆಯಿರೋ || ೧೭ ||
ರಕ್ಷೆ ಯಂತ್ರ ಮಂತ್ರ ತಂತ್ರಪೇಕ್ಷೆ ಬೇಡ ನಿಮ್ಮ
ಜನ್ಮ ಮೋಕ್ಷವನ್ನು ಪಡೆಯಲು ಅಧೋಕ್ಷಜನ್ನ ನೆನೆಯಿರೋ || ೧೮ ||
ಬ್ರಹ್ಮನಾಗಿ ನಿರ್ಮಿಸಿ ಪರಬ್ರಹ್ಮನಾಗಿ ರಕ್ಷಿಸಿ
ಸಂಹಾರಕ್ಕೆ ರುದ್ರ ನಾರಸಿಂಹನನ್ನ ನೆನೆಯಿರೋ || ೧೯ ||
ಮುಚ್ಚು ಮರೆಯ ಮಂತ್ರವಲ್ಲ ವೆಚ್ಚ ಒಂದು ಕಾಸೂ ಇಲ್ಲ
ನೆಚ್ಚದೆ ಸಂಸಾರ ಶ್ರೀಮದಚ್ಯುತನ್ನ ನೆನೆಯಿರೋ || ೨೦ ||
ಕಾದ್ರುವೇಯ ಶಯನ ಕರುಣಾರ್ದ್ರ ಹೃದಯನು ನಿತ್ಯ
ಭದ್ರಕಾಯ ಶ್ರೀ ಜನಾರ್ದನನ್ನ ನೆನೆಯಿರೋ || ೨೧ ||
ಇಂದ್ರಿಯಂಗಳೇಕವಾಗಿ ಚಂದ್ರಿಕೆಯ ತೆರದಿ ಸುತ್ತಿ
ತೊಂದ್ರೆ ತಾರದ ಮುನ್ನ ಉಪೇಂದ್ರನನ್ನ ನೆನೆಯಿರೋ || ೨೨ ||
ಹರಿ ಹರಿ ಎನ್ನಲು ದುರಿತ ಹರಿದು ಓಡುವುದು ತ್ವರಿತ
ಹಿರಿದು ಭಕ್ತಿಯಿಂದ ಸಿರಿಹರಿಯನ್ನ ನೆನೆಯಿರೋ || ೨೩ ||
ಕೃಷ್ಣನ ನಾಮವೇ ಗತಿ ಕೃಷ್ಣನ ಪಾದವೇ ಗತಿ
ಕಷ್ಟವೆಲ್ಲ ನೀಗಲು ಶ್ರೀಕೃಷ್ಣನನ್ನ ನೆನೆಯಿರೋ || ೨೪ ||
ಭಕ್ತಿ ಕೊಡುವ ಮುಕ್ತಿ ಕೊಡುವ ಮತ್ತೆ ಸಾಯುಜ್ಯವ ಕೊಡುವ
ಶಕ್ತ ನಮ್ಮ ಪುರಂದರ ವಿಠ್ಠಲನ್ನ ನೆನೆಯಿರೋ || ೨೫ ||
gaaLi baMda kaiyalli tUrikoLLirO || pa ||
naaLeyannabEDi idE vELe bannirO || apa ||
vaasavaadivinuta vaikuMThadoDeya
namma hRudayavaasaneMdu biDadE kEshavanna neneyirO || 1 ||
hEya saMsaarada marma ghaayavadu maayuvaMte
baayi muccikoLLade naaraayaNananna neneyirO || 2 ||
bOdhegaLalli sadguru bOdheyidu eMdennuta
gaadegaLellanu biTTu maadhavanna neneyirO || 3 ||
iMdina dinavE sudina iMdina sollE lEseMdu
iMdiraaramaNa gOviMdananna neneyirO || 4 ||
Ganna dEvarkaLiginnu Ganna mahimanu hari
anyavillaveMdu shrI viShNuvannu neneyirO || 5 ||
saadhaneya bhaktiyoLu shOdhanegaiyutta kaMDe
vIdhanavenuta madhusUdananna neneyirO || 6 ||
shakranige olidu jagacakravannu aLedu matte
shukrashiShyana gelida trivikramana neneyirO || 7 ||
omme neneyalu bhakti omme neneyalu mukti
ommanapUrvakadiMda vaamananna neneyirO || 8 ||
I dhareramaNanE namma Adhaara doreyu bEre
Adhaarava kaaNeneMdu shrIdharanna neneyirO || 9 ||
kaasige kai caacuvaMtha Ashaapaashavannu toredu
kaashivaasa vinuta hRuShIkEshananna neneyirO || 10 ||
I bhava timirake kOTi vibhaavasu saMkaasha
shObhaanakaara padmanaabhananna neneyirO || 11 ||
I duraacaaragiri biduruveMdaritu sanu
mOdadiMda manadi daamOdaranna neneyirO || 12 ||
puruShanaagi huTTi nUru varuSha badukidudake Palava
haruShadiMda paDeye saMkaruShaNanna neneyirO || 13 ||
ivanE sarva sharaNya ivanE lOkakke maanya
dEva dEvOttama vaasudEvananna neneyirO || 14 ||
vidye bEku buddhi bEku siddhi bEku eMbuvaru
pradyumnaa pradyumnaa pradyumnaneMdu neneyirO || 15 ||
kaddu husiyanaaDi apara buddhiyiMda keDali bEDi
buddhivaMtaraagi aniruddhananna neneyirO || 16 ||
nityanEma eMbOdilla matte daana dharmavilla
vyarthavaagi keDade puruShOttamanna neneyirO || 17 ||
rakShe yaMtra maMtra taMtrapEkShe bEDa nimma
janma mOkShavannu paDeyalu adhOkShajanna neneyirO || 18 ||
brahmanaagi nirmisi parabrahmanaagi rakShisi
saMhaarakke rudra naarasiMhananna neneyirO || 19 ||
muccu mareya maMtravalla vecca oMdu kaasU illa
neccade saMsaara shrImadachyutanna neneyirO || 20 ||
kaadruvEya shayana karuNaardra hRudayanu nitya
bhadrakaaya shrI janaardananna neneyirO || 21 ||
iMdriyaMgaLEkavaagi caMdrikeya teradi sutti
toMdre taarada munna upEMdrananna neneyirO || 22 ||
hari hari ennalu durita haridu ODuvudu tvarita
hiridu bhaktiyiMda sirihariyanna neneyirO || 23 ||
kRuShNana naamavE gati kRuShNana paadavE gati
kaShTavella nIgalu shrIkRuShNananna neneyirO || 24 ||
bhakti koDuva mukti koDuva matte saayujyava koDuva
shakta namma puraMdara viThThalanna neneyirO || 25 ||