VIDEO
ರಚನೆ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)
ಎಷ್ಟು ಸಾಹಸವಂತ ನೀನೆ ಬಲವಂತ
ದಿಟ್ಟಮೂರುತಿ ಭಳಿರೆ ಭಳಿರೆ ಹನುಮಂತ ||ಪ||
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ||ಅಪ||
ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾಲಂಕೆಯ ಕಂಡೆ ಕಿರೀಟಿ
ಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ||೧||
ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ||೨||
ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿಂ ಜಾನಕಿ ಕುರುಹನು ಕೊಡಲಾಗ
ಆ ಮಹಾ ವನದೊಳು ಫಲವನು ಬೇಡಿ ||೩||
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದ್ಯೋ ||೪||
ಶೃಂಗಾರವನದೊಳಗೆ ಇದ್ದ ರಕ್ಕಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಯಕುವರನ
ಭಂಗಿಸಿ ಬಿಸುಟಿಯೊ ಬಂದ ರಕ್ಕಸರ ||೫||
ದೂರು ಪೇಳಿದರೆಲ್ಲ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯನು ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತರೊಡನೆ ||೬||
ಪಿಡಿದನು ಇಂದ್ರಜಿತು ಕಡುಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ||೭||
ಕಂಡನು ರಾವಣನುದ್ದಂಡ ಕಪಿಯನು
ಮಂಡೆಯ ತೂಗುತ್ತ ಮಾತಾಡಿಸಿದನು
ಭಂಡುಮಾಡದೆ ಬಿಡೆನೋಡು ಕಪಿಯೆನೆ
ಗಂಡುಗಲಿಯು ದುರಿದುರಿಸಿ ನೋಡಿದನು ||೮||
ಛಲವ್ಯಾಕೊ ನಿನಗಿಷ್ಟು ಎಲವೊ ಕೋಡಗನೆ
ನೆಲೆಯಾವುದ್ಹೇಳೊ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೊ
ಹಲವು ಮಾತ್ಯಾಕೊ ಹನುಮನು ನಾನೆ ||೯||
ಬಡರಾವಣನೆ ನಿನ್ನ ಬಡಿದು ಹಾಕುವೆನೊ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೂ
ಹುಡಿಯೇಳಿಸುವೆನು ಖುಲ್ಲ ರಕ್ಕಸನೆ
ತೊಡೆವೆನೊ ನಿನ್ನ ಪಣೆಯ ಅಕ್ಷರವ ||೧೦||
ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ |೧೧||
ಕಡುಕೋಪದಿಂದಲಿ ಖೂಳರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ||೧೨||
ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಬತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸೆ
ನಿಂದ ಹನುಮನು ಬಾಲವ ಬೆಳೆಸುತ ||೧೩||
ಶಾಲು ಸಕಲಾತಿಯು ಸಾಲದೆಯಿರಲು
ಬಾಲೆರ ವಸ್ತ್ರವ ಸೆಳೆದುತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ||೧೪||
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದಗಂಟೆಯು
ಮನದಿ ಶ್ರೀರಾಮರ ಪಾದವ ನೆನೆಯುತ ||೧೫||
ಮಂಗಳಂ ಶ್ರೀರಾಮಚಂದ್ರ ಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯ ಸುಟ್ಟು
ಲಂಘಿಸಿ ಅಸುರನ ಗಡ್ಡಕೆ ಹಿಡಿದ ||೧೬||
ಹತ್ತಿತು ಅಸುರನ ಗಡ್ಡಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ||೧೭||
ಸೀತೆಯಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟಕುರುಹ ಕರದಲಿ
ಸೇತುವೆ ಕಟ್ಟಿ ಚತುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ||೧೮||
ವೆಗ್ಗಳವಾಯಿತು ರಾಮರ ದಂಡು
ಹಿಗ್ಗಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗುಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ||೧೯||
ರಾವಣಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡು ಅಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ||೨೦||
ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೊ ಅಜನಪದವಿಯ ||೨೧||
eShTu saahasavaMta nIne balavaMta
diTTamUruti bhaLire bhaLire hanumaMta ||pa||
aTTuva KaLarede meTTi tuLidu tale
kuTTi ceMDaaDida diTTa nInahudo ||apa||
raamarappaNeyiMda sharadhiya daaTi
A mahaalaMkeya kaMDe kirITi
svaamikaaryavanu prEmadi naDesidi
I mahiyoLu ninagaarai saaTi ||1||
dUradiMdasurana puravannu nODi
bharadi shrIraamara smaraNeya maaDi
haaride haruShadi harisi laMkiNiyanu
vaarijamuKiyanu kaMDu maataaDi ||2||
raamara kShEmava ramaNige pELi
taamasa maaDade mudrike neeDi
prEmadiM jaanaki kuruhanu koDalaaga
A mahaa vanadoLu Palavanu bEDi ||3||
kaNNige priyavAda haNNanu koydu
haNNina nevadali asurara hoydu
paNNapaNNane haari negenegedaaDuta
baNNisi asurara balavanu muridyO ||4||
shRuMgaaravanadoLage idda rakkasara
aMgavanaLiside atiraNashUra
nuMgi astragaLa akShayakuvarana
bhaMgisi bisuTiyo baMda rakkasara ||5||
dUru pELidarella raavaNanoDane
cIrutta karesida iMdrajituvane
cOrakapiyanu hiDitahudennuta
shUrara kaLuhida nijasutaroDane ||6||
piDidanu iMdrajitu kaDukOpadiMda
heDemuri kaTTida brahmaastradiMda
guDuguDuguTTuta kiDikiDiyaaguta
naDedanu laMkeya oDeyaniddeDege ||7||
kaMDanu raavaNanuddaMDa kapiyanu
maMDeya tUgutta maataaDisidanu
bhaMDumaaDade biDenODu kapiyene
gaMDugaliyu duridurisi nODidanu ||8||
Calavyaako ninagiShTu elavo kODagane
neleyaavud~hELo ninnoDeyanhesarannu
balavaMta raamara baMTa baMdiheno
halavu maatyaako hanumanu naane ||9||
baDaraavaNane ninna baDidu haakuveno
oDeyanappaNeyilla eMdu taaLidenU
huDiyELisuvenu Kulla rakkasane
toDeveno ninna paNeya akSharava ||10||
ninnaMtha dUtaru raamana baLiyoLu
inneShTu maMdi uMTu hELo nI tvariyaa
nannaMtha dUtaru ninnaMtha prEtaru
innUru munnUru kOTi kELariyaa |11||
kaDukOpadiMdali KULaraavaNanu
suDireMda baalava sutti vasanavanu
oDeyana maatige taDebaDeyillade
oDane muttidaru gaDimaneyavaru ||12||
taMdaru vasanava taMDataMDadali
oMdoMdu mUTe eMbattu kOTiyali
caMdadi haraLina tailadoLaddise
niMda hanumanu baalava beLesuta ||13||
shaalu sakalaatiyu saaladeyiralu
baalera vastrava seLedutaarenalu
baalava nillise beMkiyaniDutali
kaalamRutyuva keNakidaralli ||14||
kuNikuNidaaDuta kUgi bobbiDuta
iNikinODuta asuraranaNakisuta
JaNaJaNaJaNarene baaladagaMTeyu
manadi shrIraamara paadava neneyuta ||15||
maMgaLaM shrIraamacaMdra mUrutige
maMgaLaM sItaadEvi caraNaMgaLige
maMgaLavenuta laMkeya suTTu
laMGisi asurana gaDDake hiDida ||16||
hattitu asurana gaDDamIsegaLu
suttitu hoge brahmaaMDakOTiyoLu
cittadi raamaru kOpisuvaru eMdu
citradi naDedanu arasaniddeDege ||17||
sIteyakShEmava raamarig~hELi
prItiyiM koTTakuruha karadali
sEtuve kaTTi caturaMga balasaha
muttitu laMkeya sUregaiyutali ||18||
veggaLavaayitu raamara daMDu
higgitu laMkeya kOTeya kaMDu
heggada kaayvara nuggumaaDutire
Jaggane pELdaru raavaNagaMdu ||19||
raavaNamodalaada raakShasara koMdu
bhaavashuddhadali vibhIShaNa baaLeMdu
dEvi sIteyanoDagoMDu ayOdhyadi
dEva shrIraamaru raajyavaaLidaru ||20||
shaMKadaityana koMde sharaNu sharaNayya
shaMKagiriyali niMde hanumaMtaraaya
paMkajaakSha hayavadanana kaTaakShadi
biMkadi paDedeyo ajanapadaviya ||21||