ಅಸುರರನು ಅಳಿಯ ಬಂದೆನು ನಾನು ನಿನ್ನ
ವೈರಿ ದಶರಥ ರಾಮನಾಳೆಂದ ||ಪ||
ಹೊಸ ಕಪಿಯೆ ನೀನು ಬಂದುದೇನು ಕಾರಣವೆನಲು
ದಿಶೆಗೆ ಬಲ್ಲಿದ ಹನುಮ ನಾ ಕೇಳೊ | ನಿ-
ನ್ನಸುರ ಪಡೆಯ ಮಡುಹ ಬಂದೆ ನಿನ್ನ
ಎಸೆವ ಪಾದದಲೊದೆಯ ಬಂದೆ ವನದ
ಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನ
ದಶಶಿರವ ಕತ್ತರಿಸಿ ಎಸೆವ ರಾಮರ ಮಡದಿ
ಹಸುಳೆ ಸೀತೆಯ ಅರಸಲು ಬಂದೆ ||೧||
ಎನ್ನ ವೈರಿಗಳು ಇನ್ಯಾರೆಂದು ರಾವಣನು
ಹೊನ್ನಕುಂಡಲದ ಹನುಮನೆ ಕೇಳೊ
ಮುನ್ನವರ ಸಾಹಸವಯೇನೆಂಬೆ ಅವರ
ಪರ್ನಶಾಲೆಯ ಹೊಕ್ಕು ಬಂದೆ ರಾಮ-
ಕನ್ಯೆ ಸೀತಾಂಗನೆಯ ತಂದೆ
ತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ
ಇನ್ನು ಹೆಮ್ಮೆ ಮಾತ್ಯಾತಕೊ ಕಪಿಯೆ ||೨||
ಕಚ್ಚಿ ಕೀಳಲೊ ಕಣ್ಣು ಹತ್ತು ತಲೆಯನೆ ಹಿಡಿದು
ನುಚ್ಚು ನುರಿ ಮಾಡಿ ಕೊಲ್ಲಲೊ ನಿನ್ನ ಇಷ್ಟು
ಹೆಚ್ಚಿನ ಮಾತ್ಯಾಕೋ ನಿನಗೆ ಬಹಳ
ಕಿಚ್ಚು ತುಂಬಿತು ಕೇಳೋ ಎನಗೆ ಒಂದು
ಮೆಚ್ಚು ಹೇಳುವೆನೊ ರಾಮರಿಗೆ
ಅಚ್ಯುತನ ಬಾಣಕೆ ಮೀಸಲಾಗಿರು ನೀನು
ಎಚ್ಚೆತ್ತು ತಾಳು ತಾಳೊ ||೩||
ಮುನ್ನೂರ ಮೂವತ್ತು ಕೋಟಿ ದೇವತೆಗಳನು
ಇನ್ನು ನಾ ಸೆರೆಯಾಳುತಿಹೆನೋ ಕಪಿಯೇ ಈಗ
ಎನ್ನ ಮ್ಯಾಲೆ ದಂಡೆತ್ತಿ ಬಾಹೊನ್ಯಾರೋ ನೀನು
ಎನ್ನ ಮನೆ ಭಂಡಾರ ನೋಡೋ
ಎನ್ನ ಸಾಹಸಕೆ ಈಡ್ಯಾರೋ
ಮುನ್ನ ಹಣೆಯಲಿ ಬರೆದ ವಿಧಿ ಕಾಲಮಣೆಯಾಗಿ
ಬೆನ್ನ ಬಿಡದಿಹ ಪರಿಯ ನೋಡೋ ||೪||
ಎನ್ನ ಸೋದರ ಮಾವ ವಾಲಿಯನು ಕೊಂದೀಗ
ತಮ್ಮ ಸುಗ್ರೀವಗೊಲಿದು ವರವಿತ್ತು
ನಿನ್ನ ಕೊಂಡೊಯ್ದನೆಂಬುವರೊ ನಿನ್ನ
ಚಿನ್ನನತೊಟ್ಟಿಲಿಗೆ ಕಟ್ಟುವರೊ ನಿನ್ನ
ಹೊನ್ನ ತುಂಬೆಂದು ಆಡ್ಸುವರೊ
ನಿನ್ನ ಶಿರವರಿದು ವಿಭೀಷಣಗೆ ಪುರವ ಕೊಡಬೇಕೆನುತ
ಎನ್ನೊಡೆಯ ಬರುತಾನೆ ತಾಳೊ ಎಂದ ||೫||
ಎತ್ತಿ ಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿವ
ಕತ್ತಿ ಇಪ್ಪತ್ತು ಕಾಣೋ ಕಪಿಯೆ
ಎತ್ತಿ ಕಡಿವೆನು ಬಾಹುದಂಡ ಬೆ-
ನ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನ
ಚಿತ್ತದಲಿ ತಿಳಿದುಕೊಳ್ಳೆಂದ
ಮತ್ತೆ ನಾ ತಾಳಿ ಕೈಗಾಯಿದೆನ್ನಲ್ಲದೆ ಬಾಯ
ಬತ್ತಿಸದೆ ಬಿಡುವೆನೇನೋ ಕಪಿಯೆ ||೬||
ಮತ್ತ ರಾವಣ ನೀನು ಹೊತ್ತಿಹ ಭೂಮಿ ಹಣತಿ
ಸುತ್ತಣ ಸಮುದ್ರವೆ ತೈಲ
ಎತ್ತಿ ಹಿಡಿವಳು ಸೀತೆ ದೀಪ ನಮ್ಮ
ಚಿತ್ತದೊಲ್ಲಭನ ಪ್ರತಾಪ ನಿನ್ನ
ಲಂಕಪಟ್ಟಣವು ಸುಡುವಂತೆ ಶಾಪ
ಹತ್ತು ತಲೆ ಹುಳ ಹಾರಿ ಬಂದು ಬ್ಯಾಗ
ಸುತ್ತಿ ಬೀಳುವುದು ದೀಪದೊಳಗೆ ||೭||
ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದು
ಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗ
ಪೊಚ್ಚ ಸೀರೆಗಳ ಸುತ್ತಿದರು ತ್ವರಿತ
ಅಚ್ಚ ಎಣ್ಣೆಯಲಿ ತೋಯಿಸಿದರು ಬಾಲ
ಹೆಚ್ಚಿಸಲು ಕಂಡು ಬೆದರಿದರು
ಕಿಚ್ಚು ಹಚ್ಚಲು ರಕ್ಕಸರ ಗಡ್ಡ ಮೀಸೆ ಸಹ
ಎಚ್ಚರಿಸಿ ಸುಟ್ಟ ಲಂಕಾಪುರವ ||೮||
ಅಸುರರೆಲ್ಲರ ಮಡುಹಿ ಪುರವನೆಲ್ಲವ ಸುಟ್ಟು
ವಸುಧೆ ಅಂಬುಧಿಯ ದಾಟಿ ಬಂದ
ವಸುಧೆಯೊಳ್ವ್ಯಾಸ ಯತಿಯಿಂದ ಪೂಜಿತನಾಗಿ
ಎಸೆವ ಚಕ್ರತೀರ್ಥದಲಿನಿಂದ ಭವ-
ಭಸಿತ ಯಂತ್ರೋದ್ಧಾರಕಾನಂದ
ಅಸಮ ಹಯವದನ ಕೋದಂಡರಾಮರ ಬಂಟ
ಮಿಸುನಿ ಮುಖ್ಯಪ್ರಾಣ ವರದ ಮೆರೆದ ||೯||
asuraranu aLiya baMdenu naanu ninna
vairi dasharatha raamanaaLeMda ||pa||
hosa kapiye nInu baMdudEnu kaaraNavenalu
dishege ballida hanuma naa kELo | ni-
nnasura paDeya maDuha baMde ninna
eseva paadadalodeya baMde vanada
sasiya kittIDyaaDi niMde ninna
dashashirava kattarisi eseva raamara maDadi
hasuLe sIteya arasalu baMde ||1||
enna vairigaLu inyaareMdu raavaNanu
honnakuMDalada hanumane kELo
munnavara saahasavayEneMbe avara
parnashaaleya hokku baMde raama-
kanye sItaaMganeya taMde
tanna billa taa hottu tiruguvuda kaMDe
innu hemme maatyaatako kapiye ||2||
kacci kILalo kaNNu hattu taleyane hiDidu
nuccu nuri maaDi kollalo ninna iShTu
heccina maatyaakO ninage bahaLa
kiccu tuMbitu kELO enage oMdu
meccu hELuveno raamarige
acyutana baaNake mIsalaagiru nInu
eccettu taaLu taaLo ||3||
munnUra mUvattu kOTi dEvategaLanu
innu naa sereyaaLutihenO kapiyE Iga
enna myaale daMDetti baahonyaarO nInu
enna mane bhaMDaara nODO
enna saahasake IDyaarO
munna haNeyali bareda vidhi kaalamaNeyaagi
benna biDadiha pariya nODO ||4||
enna sOdara maava vaaliyanu koMdIga
tamma sugrIvagolidu varavittu
ninna koMDoydaneMbuvaro ninna
cinnanatoTTilige kaTTuvaro ninna
honna tuMbeMdu ADsuvaro
ninna shiravaridu vibhIShaNage purava koDabEkenuta
ennoDeya barutaane taaLo eMda ||5||
etti hiDiva kaipaMju lekkavilla naa hiDiva
katti ippattu kaaNO kapiye
etti kaDivenu baahudaMDa be-
nhatti baDiyade biDenu kaMDyaa ninna
cittadali tiLidukoLLeMda
matte naa taaLi kaigaayidennallade baaya
battisade biDuvenEnO kapiye ||6||
matta raavaNa nInu hottiha bhUmi haNati
suttaNa samudrave taila
etti hiDivaLu sIte dIpa namma
cittadollabhana prataapa ninna
laMkapaTTaNavu suDuvaMte shaapa
hattu tale huLa haari baMdu byaaga
sutti bILuvudu dIpadoLage ||7||
heccina maatiShTu ivagyaake hiDitaMdu
kiccu hacciro baalake eMda Aga
pocca sIregaLa suttidaru tvarita
acca eNNeyali tOyisidaru baala
heccisalu kaMDu bedaridaru
kiccu haccalu rakkasara gaDDa mIse saha
eccarisi suTTa laMkaapurava ||8||
asurarellara maDuhi puravanellava suTTu
vasudhe aMbudhiya daaTi baMda
vasudheyoLvyaasa yatiyiMda pUjitanaagi
eseva cakratIrthadaliniMda bhava-
bhasita yaMtrOddhaarakaanaMda
asama hayavadana kOdaMDaraamara baMTa
misuni muKyapraaNa varada mereda ||9||