ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು || ಪ ||
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ || ಅಪ||
ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷ
ನೊಂದೆನಯ್ಯ ಅಂದಂದು ಮಾಡಿದ ಅಘದಿ
ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು
ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ || ೧ ||
ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು
ವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆ
ಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆ
ಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ || ೨ ||
ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ
ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ
ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ
ವಾಸ ನಿನ್ನ ಪೂಜಿಸದೆ ಮೋಸ ಹೋದೆನಯ್ಯ ನಾನು || ೩ ||
ಸ್ನಾನ ಮೌನಂಗಳನು ಮಾಡುವೆ ಸಕಲ ಜನರ ಮುಂದೆ
ಮಾನವರಿಲ್ಲದಾಗಲೇ ಮೌನವಿಲ್ಲ ಮಂತ್ರವಿಲ್ಲ
ಜ್ಞಾನವ ಪೇಳುವೆ ಮೋಸಕಟ್ಟಲೆಯ ಮಾಡಿಕೊಂಡು
ಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಾ ನಿನ್ನ ಮರೆವೆ || ೪ ||
ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು
ಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದು
ನಿನ್ನ ವಾರ್ತೆಯ ಕರಣ ಕೇಳದು ಅನ್ಯವಾರ್ತೆಗೆ ಹೊತ್ತು ಸಾಲದು
ಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು || ೫ ||
ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗ
ತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವ
ಹಂಬಲಿಸಿ ವಿಷಯಗಳಿಗೆ ಡಂಭನಾಗಿ ಕೆಟ್ಟು ವೃಥಾ
ಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ || ೬ ||
ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣು ಕಾಣಬಾರದು
ಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನ
ತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊ
ಪೊದ್ದಿದವರ ಪೊರೆವ ಕರುಣಾ ಸಿಂಧು ಎನಗೆ ನೀನೆ ಬಂಧು || ೭ ||
IgalO inyaavaagalO I tanuvu pOgadiradu || pa ||
bhOgadaaseya biDisayya naagashayana naLinanayana || apa||
eMbattunaalku lakSha yOnigaLali baMdu aMbujaakSha
noMdenayya aMdaMdu maaDida aGadi
kuMbhIpaaka modalaada kutsita narakadi biddu
uMba duHKava biDisayya udadhishayana puNyakathana || 1 ||
Odi maruLaadenayya Odana maatrakke sabheyoLu
vaadisuve vEdashaastra upanyaasaMgaLanu maaDuve
krOdharahitanaagi avaru koDalu koMDaaDuve
Adarisadiddaravara baidu baruve Kinnanaagi || 2 ||
dEshadEshaMgaLige dhanada Asegaagi pOgi pOgi
byaasarade kaMDavara kaaDi bEDi baLalide
kaasina laabhavu kaaNe Gaasiyaadenayya shrIni
vaasa ninna pUjisade mOsa hOdenayya naanu || 3 ||
snaana mounaMgaLanu maaDuve sakala janara muMde
maanavarilladaagalE mounavilla maMtravilla
j~jaanava pELuve mOsakaTTaleya maaDikoMDu
dhyaanisade hoTTeyannu horeve naa ninna mareve || 4 ||
heNNu honninaase biDadu puNyakke mana oDaMbaDadu
ennadeMbo mamate taggadu dhanyajanake shiravu baggadu
ninna vaarteya karaNa kELadu anyavaartege hottu saaladu
innu hEsike manake baaradu muMdina gatige daari tOradu || 5 ||
aMbuvara naanariye kuTuMbigaLa salahalOsuga
tiMbe hInara maneyoLannava naMbe ninna caraNava
haMbalisi viShayagaLige DaMbhanaagi keTTu vRuthaa
kuMbhiNige bhaaravaadenu kaMbukaMdhara ninna neneyade || 6 ||
vRuddhanaadenu palgaLella biddavu kaNNu kaaNabaaradu
eddu nillalaarenayya uddhariso hayavadana
tiddi manava ninna paadapadmava nenevaMte maaDo
poddidavara poreva karuNaa siMdhu enage nIne baMdhu || 7 ||