ನಾರಸಿಂಹನೆಂಬ ದೇವನು ನಂಬಿದಂಥ ನರರಿಗೆಲ್ಲ ವರವ ಕೊಡುವನು ||ಪ||
ಆದಿಯಲ್ಲಿ ಲಕ್ಷ್ಮಿ ಸಹಿತದಿ ಮಲಗಿರಲು ಬಂದರಾಗ ಸನತ್‌ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ||೧||
ದಿತಿಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳುಹಿದನು ||೨||
ಅನುಜನಾದ ಹಿರಣ್ಯಾಕ್ಷನ ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ||೩||
ಇಂದ್ರಲೋಕ ಸೂರೆ ಮಾಡಿದ ಮೂರು ಲೋಕಕೆ ಅಸುರ ತನ್ನ ಭಯವ ತೋ-
ರಿದ ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ
ಬಂದು ಆಗ ದೈತ್ಯರಾಜ ಹಿರಣ್ಯಕಶಿಪುವಿಗೆ ಒಪ್ಪಿಸಿದನು ||೪||
ನವಮಾಸಗಳು ತುಂಬಲು ಕಯಾದು ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ||೫||
ಬಾಲಚಂದ್ರನಂತೆ ಬೆಳೆಯುತಾ ಇರುತಿರಲು ಐದು ವರ್ಷ ತುಂಬಿತಾಗಲೇ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ||೬||
ಓಂ ನಮಃ ಶಿವಾಯ ಎನುತಲಿ ಅಸುರ ತನ್ನ ಸುತನ ಬರೆದು ತೋರು
ಎನ್ನಲು ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಎಡ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ||೭||
ಸುತ್ತ ಜನರ ಕರೆಸಿ ಬೇಗದಿ ಅಸುರ ತನ್ನ ಸುತನ ಕೊಲಿಸಬೇಕು ಎಂದಾಗ
ಅಟ್ಟ ಅಡವಿಯೊಳು ವಿಷವಹಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ||೮||
ಅಂಬುಧಿಯೋಳು ಮಗನ ಮಲಗಿಸಿ ಮೇಲೆ ದೊಡ್ಡ ಬೆಟ್ಟವನ್ನು ಇಟ್ಟು
ಬನ್ನಿರೋ ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿಸಿದನು ||೯||
ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಉರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ||೧೦||
ನಿನ್ನ ದೇವ ಇದ್ದ ಎಡೆಯನು ತೋರು ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ ನರಹರಿ ||೧೧||
ವರಕಂಭವನ್ನು ಒದೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರುಳ ಬಗೆದು ಮಾಲೆ ಹಾಕಿ ಕಂದಭಕ್ತನಪ್ಪಿಕೊಂಡ ||೧೨||
ಅಂತರಿಕ್ಷದಲ್ಲಿ ಅಮರರು ನೋಡಿ ಆಗ ಪುಷ್ಪವೃಷ್ಟಿಯನ್ನೇ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯ ಕೊಟ್ಟ ||೧೩||
ಲಕ್ಷ್ಮೀ ನಾರಸಿಂಹನ ಚರಿತೆಯ ಉದಯ ಕಾಲ ಪಠಿಸುವಂಥ ನರರಿಗೆಲ್ಲ
ಪುತ್ರಸಂತಾನ ಕೊಟ್ಟು ಮತ್ತೆ ಬೇಡದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ ಪುರಂದರ ವಿಠ್ಠಲರಾಯ ||೧೪||
nArasiMhaneMba dEvanu naMbidaMtha nararigella varava koDuvanu ||pa||
Adiyalli lakShmi sahitadi malagiralu baMdarAga sanat^^kumAraru
Aga dvArapAlakaru taDeyalAga kOpadiMda
mUru janmadalli nIvu asurarAgi puTTireMdaru ||1||
ditiya garBadalli janisida hiraNyAkSha hiraNyakaSipureMba BrAtRuru
pRuthviyannu muLugisida kAraNadi SrIhariyu
tRutIya rUpadiMda KaLana koMdu dhareyanuLuhidanu ||2||
anujanAda hiraNyAkShana maraNavannu kELi Aga naDeda tapassige
hariya mEle siTTiniMda ugratapassannu mADi
brahmaniMda varagaLannu paDedukoMDu baMdanAga ||3||
iMdralOka sUre mADida mUru lOkake asura tanna Bayava tO-
rida garBiNi kayAduvannu brahmaputra
baMdu Aga daityarAja hiraNyakaSipuvige oppisidanu ||4||
navamAsagaLu tuMbalu kayAdu Aga putraratnavannu paDedaLu
nAmakaraNavannu mADi viprarannu karesi bEga
daitya tanna sutage prahlAdaneMdu karesidanu ||5||
bAlacaMdranaMte beLeyutA irutiralu aidu varSha tuMbitAgalE
gurugaLannu karesi bEga sakala vidye kalisireMdu
gurugaLige maganannu oppisida daitya tAnu ||6||
OM namaH SivAya enutali asura tanna sutana baredu tOru
ennalu narahariya nAmavannu nagunagutali bareyutiralu
eDa toDeya mElidda SiSuva baDidu dharege nUkidanu ||7||
sutta janara karesi bEgadi asura tanna sutana kolisabEku eMdAga
aTTa aDaviyoLu viShavahiTTu BOjanaMgaLa mADi
hariya smaraNe mAtradiMda BuMji tiLida jaTTihAMge ||8||
aMbudhiyOLu magana malagisi mEle doDDa beTTavannu iTTu
bannirO hariya kRupege vaSanAda taraLaneMdu varuNadEva
maraNa illadahAMge mADi manege koTTu kaLuhisidanu ||9||
beTTadiMda kaTTi uruLisi asura tanna paTTadAne kAlali meTTisi
uriva oleya mADi suTTu huliya bOninalliTTu
yatnavillade sutana kollalu Saktanallade pOdanaMte ||10||
ninna dEva idda eDeyanu tOru enuta pitanu tanna sutana kOralu
enna dEva illadaMta eDegaLuMTe lOkadalli
kaMBadallu iruvaneMdu kaiya mugidu tOrdanAga narahari ||11||
varakaMBavannu odeyalu narahariyu ugrakOpavannu tALida
kaTakaTeMba dhvaniya mADi naKagaLiMda piDidu otti
karuLa bagedu mAle hAki kaMdaBaktanappikoMDa ||12||
aMtarikShadalli amararu nODi Aga puShpavRuShTiyannE karedaru
ajana paDeda dEvi baMdu toDeya mEle kuLitiralu
amarapatiyarellara nODi aMjabEDeMdaBaya koTTa ||13||
lakShmI nArasiMhana cariteya udaya kAla paThisuvaMtha nararigella
putrasaMtAna koTTu matte bEDadahAMge koTTu
Baktavatsala mukti koDuva puraMdara viThThalarAya ||14||