ಎಚ್ಚರದಲಿ ನಡೆ ಮನವೆ, ಮುದ್ದು
ಅಚ್ಯುತನ ದಾಸರ ಒಡಗೂಡಿ ಬರುವೆ ||ಪ||
ಅನ್ನದಾನವ ಮಾಡೋದಿಲ್ಲಿ, ಮೃ-
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ಮಾಡುವುದಿಲ್ಲಿ ನಿನ್ನ
ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||೧||
ತಂದೆ ತಾಯ್ಗಳ ಪೂಜೆಯಲ್ಲಿ ದೇ-
ವೇಂದ್ರನ ಸಭೆಯ ತೋರುವರೊ ನಿನಗಲ್ಲಿ
ತಂದೆ ತಾಯ್ಗಳ ಬಯ್ವುದಿಲ್ಲಿ ಹುಲ್ಲು
ದೊಂದೆಯ ಕಟ್ಟಿ ಸುಡಿಸುವರೊ ಅಲ್ಲಿ ||೨||
ಆಲಯ ದಾನವು ಇಲ್ಲಿ
ವಿಶಾಲ ವೈಕುಂಠದೊಳಿಡುವರೊ ಅಲ್ಲಿ
ಆಲಯ ಮುರಿಯುವುದಿಲ್ಲಿ ನಿನ್ನ
ಶೂಲದ ಮರವನೇರಿಸಿ ಕೊಲ್ವರಲ್ಲಿ ||೩||
ಅತ್ತೆ ಮಾವನ ಸೇವೆಯಿಲ್ಲಿ, ಮತ್ತೆ
ಉತ್ತಮ ಪತಿವ್ರತೆಯೆಂಬುವರಲ್ಲಿ
ಅತ್ತೆ ಮಾವನ ಬಯ್ಯುವುದಿಲ್ಲಿ, ನಿನ್ನ
ಕತ್ತು ಗರಗಸದಲ್ಲಿ ಕೊಯ್ಯುವರಲ್ಲಿ ||೪||
ಗಂಡನ ಭಕ್ತಿಯು ಇಲ್ಲಿ, ನಮ್ಮ
ಪುಂಡರೀಕಾಕ್ಷನು ಒಲಿಯುವನಲ್ಲಿ
ಗಂಡನ ನಿಂದಿಪುದಿಲ್ಲಿ, ನಿನ್ನ
ಖಂಡ ಖಂಡವ ಕತ್ತರಿಸುವರಲ್ಲಿ ||೫||
ಮದ್ದಿಟ್ಟು ಕೊಲ್ಲುವುದಿಲ್ಲಿ,ಒ-
ದ್ದೊದ್ದು ಹದ್ದು ಕಾಗೆಗೆ ಹಾಕುವರಲ್ಲಿ
ಕ್ಷುದ್ರಬುದ್ಧಿಯ ಮಾಡೋದಿಲ್ಲಿ,ದೊಡ್ಡ
ಗುದ್ದಲಿ ಕಾಸಿ ಬೆನ್ನೊಳು ಎಳೆವರಲ್ಲಿ ||೬||
ಯಾಚಕರ ಮನ್ನಿಪುದಿಲ್ಲಿ, ನಿನ್ನ
ಯೋಚನೆಯಿಲ್ಲದೆ ಸಲಹುವರಲ್ಲಿ
ಯಾಚಕರನು ಬಯ್ವುದಿಲ್ಲಿ, ನಿನ್ನ
ನಾಚಿಕೆ ತೆಗೆದು ನಾಲಗೆ ಸೀಳ್ವರಲ್ಲಿ ||೭||
ಧರ್ಮವ ಮಾಡುವುದಿಲ್ಲಿ, ಸು
ಧರ್ಮ ಸಭೆಯ ತೋರುವರು ಮುಂದಲ್ಲಿ
ಕರ್ಮ ಯೋಚನೆಗಳು ಇಲ್ಲಿ , ನಿನಗೆ
ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||೮||
ಹೆಣ್ಣು ಹೊನ್ನನು ಬಯಸೋದಿಲ್ಲಿ , ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಘನ್ನ ಸುಜ್ಞಾನವು ಇಲ್ಲಿ, ಪ್ರ
ಸನ್ನ ಪುರಂದರವಿಠಲ ಪಾಲಿಪನಲ್ಲಿ ||೯||
eccaradali naDe manave, muddu
acyutana daasara oDagUDi baruve ||pa||
annadaanava maaDOdilli, mRu-
ShTaannava taMdu muMdiDuvaru alli
anyaaya maaDuvudilli ninna
benna carmava sILi tinisuvaralli ||1||
taMde taaygaLa pUjeyalli dE-
vEMdrana sabheya tOruvaro ninagalli
taMde taaygaLa bayvudilli hullu
doMdeya kaTTi suDisuvaro alli ||2||
Alaya daanavu illi
vishaala vaikuMThadoLiDuvaro alli
Alaya muriyuvudilli ninna
SUlada maravanErisi kolvaralli ||3||
atte maavana sEveyilli, matte
uttama pativrateyeMbuvaralli
atte maavana bayyuvudilli, ninna
kattu garagasadalli koyyuvaralli ||4||
gaMDana bhaktiyu illi, namma
puMDarIkaakShanu oliyuvanalli
gaMDana niMdipudilli, ninna
khaMDa khaMDava kattarisuvaralli ||5||
maddiTTu kolluvudilli,o-
ddoddu haddu kaagege haakuvaralli
kShudrabuddhiya maaDOdilli,doDDa
guddali kaasi bennoLu eLevaralli ||6||
yaacakara mannipudilli, ninna
yOcaneyillade salahuvaralli
yaacakaranu bayvudilli, ninna
naacike tegedu naalage sILvaralli ||7||
dharmava maaDuvudilli, su
dharma sabheya tOruvaru muMdalli
karma yOcanegaLu illi , ninage
nirmisihanu krimi tinnuvudalli ||8||
heNNu honnanu bayasOdilli , ninna
kaNNige suNNava tuMbuvaralli
Ganna suj~jaanavu illi, pra
sanna puraMdaraviThala paalipanalli ||9||