ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರಿದನಾದರದಿ ಕೇಳುವುದು||
ಕೃತಿರಮಣ ಪ್ರದ್ಯುಮ್ನ ವಸುದೇ
ವತೆಗಳಹಂಕಾರತ್ರಯದೊಳು
ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು
ಹುತವಹಾಕ್ಷ ಅಂತರ್ಗತ ಜಯಾ
ಪತಿಯು ತಾನೇ ಮೂರಧಿಕ ತ್ರಿಂ
ಶತಿ ಸುರೂಪದಿ ಭೋಕ್ತೃಯೆನಿಸುವ ಭೋಕ್ತೃಗಳೊಳಿದ್ದು ||೧||
ಆರಧಿಕಮೂವತ್ತುರೂಪದಿ
ವಾರಿಜಾಪ್ತನೊಳಿರುತಿಹನು ಮಾ
ಯಾರಮಣ ಶ್ರೀ ವಾಸುದೇವನು ಕಾಲನಾಮದಲಿ
ಮೂರುವಿಧ ಪಿತೃಗಳೊಳು ವಸು ತ್ರಿಪು
ರಾರಿಯಾದಿತ್ಯಗನಿರುದ್ಧನು
ತೋರಿಕೊಳ್ಳದೆ ಕರ್ತೃಕರ್ಮ ಕ್ರಿಯನೆನಿಸಿಕೊಂಬ ||೨||
ಸ್ವವಶ ನಾರಾಯಣನು ತಾ ಷ
ಣ್ಣವತಿ ನಾಮದಿ ಕರೆಸುತಲಿ ವಸು
ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು
ನೆವನವಿಲ್ಲದೆ ನಿತ್ಯದಲಿ ತ
ನ್ನವರು ಮಾಡುವ ಸೇವೆ ಕೈಕೊಂ
ಡವರ ಪಿತೃಗಳಿಗೀವನಂತಾನಂತ ಸುಖಗಳನು ||೩||
ತಂತು ಪಟದಂದದಲಿ ಲಕುಮೀ
ಕಾಂತ ಪಂಚಾತ್ಮಕನೆನಿಸಿ ವಸು
ಕಂತುಹರ ರವಿ ಕರ್ತೃಗಳೊಳಿದ್ದನವರತ ತನ್ನ
ಚಿಂತಿಸುವ ಸಂತರನು ಗುರು ಮ
ಧ್ವಾಂತರಾತ್ಮಕ ಸಂತಯಿಸುವನು
ಸಂತತಖಿಳಾರ್ಥಗಳ ಪಾಲಿಸಿ ಇಹಪರಂಗಳಲಿ ||೪||
ತಂದೆತಾಯ್ಗಳ ಪ್ರೀತಿಗೋಸುಗ
ನಿಂದ್ಯ ಕರ್ಮವ ತೊರೆದು ವಿಹಿತಗ
ಳೊಂದು ಮೀರದೆ ಸಾಂಗಕರ್ಮಗಳಾಚರಿಸುವವರು
ವಂದನೀಯರಾಗಿಳೆಯೊಳಗೆ ದೈ
ನಂದಿನದಿ ದೈಶಿಕ ದಹಿಕ ಸುಖ
ದಿಂದ ಬಾಳ್ವರು ಬಹು ದಿವಸದಲಿ ಕೀರ್ತಿಯುತರಾಗಿ ||೫||
ಅಂಶಿ ಅಂಶಾಂತರ್ಗತತ್ರಯ
ಹಂಸವಾಹನ ಮುಖ್ಯದಿವಿಜರ
ಸಾಂಶದಲಿ ತಿಳಿದಂತರಾತ್ಮಕ ಶ್ರೀ ಜನಾರ್ದನನ
ಸಂಸ್ಮರಣೆ ಪೂರ್ವಕದಿ ಷಡಧಿಕ
ತ್ರಿಂಶತಿತ್ರಯರೂಪವರಿತು ವಿ
ಪಾಂಸಗನ ಪೂಜಿಸುವರವರೆ ಕೃತಾರ್ಥರೆನಿಸುವರು ||೬||
ಮೂರುವರೆ ಸಾವಿರದ ಮೇಲರೆ
ನೂರೈದು ರೂಪದಿ ಜನಾರ್ದನ
ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು
ಬಾರದಂತೆ ಬಹುಪ್ರಕಾರ ಖ
ರಾರಿ ಕಾಪಾಡುವನು ಸರ್ವ ಶ
ರೀರಗಳೊಳಿದ್ದವರವರ ಪೆಸರಿಂದ ಕರೆಸುತಲಿ ||೭||
ಜಯ ಜಯ ಜಯಾಕಾಂತ ದತ್ತಾ
ತ್ರೇಯ ಕಪಿಲ ಮಹಿದಾಸ ಭಕ್ತ
ಪ್ರಿಯ ಪುರಾತನ ಪುರುಷ ಪೂರ್ಣಾನಂದ ಜ್ಞಾನಘನ
ಹಯವದನ ಹರಿ ಹಂಸ ಲೋಕ
ತ್ರಯ ವಿಲಕ್ಷಣ ನಿಖಿಳಜಗದಾ
ಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಪುದು ||೮||
ಷಣ್ಣವತಿಯೆಂಬಕ್ಷರೇಡ್ಯನು
ಷಣ್ಣವತಿ ನಾಮದಲಿ ಕರೆಸುತ
ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ
ಪುಣ್ಯ ಕರ್ಮವ ಸ್ವೀಕರಿಸಿ ಕಾ
ರುಣ್ಯ ಸಾಗರ ಸಲಹುವನು ಬ್ರ
ಹ್ಮಣ್ಯದೇವ ಭವಾಬ್ಧಿಪೋತ ಬಹುಪ್ರಕಾರದಲಿ ||೯||
ದೇಹಗಳ ಕೊಡುವವನು ಅವರವ
ರಹರವನು ಕೊಡದಿಹನೆ ಸುಮನಸ
ಮಹಿತ ಮಂಗಳ ಚರಿತ ಸದ್ಗುಣಭರಿತನನವರತ
ಅಹಿಕಪಾರತ್ರಿಕಸುಖಪ್ರದ
ವಹಿಸಿ ಬೆನ್ನಿಲಿ ಬೆಟ್ಟವಮೃತವ
ದ್ರುಹಿಣ ಮೊದಲಾದಮರರಿಗುಣಿಸಿದ ಮುರಿದನಹಿತರನ ||೧೦||
ದ್ರುಹಿಣ ಮೊದಲಾದಮರರಿಗೆ ಸ
ನ್ಮಹಿತ ಮಾಯಾರಮಣ ತಾನೇ
ಸ್ವಹನೆನಿಸಿ ಸಂತೃಪ್ತಿಬಡಿಸುವ ಸರ್ವಕಾಲದಲಿ
ಪ್ರಹಿತ ಸಂಕರುಷಣನು ಪಿತೃಗಳಿ
ಗಹರನೆನಿಪ ಸ್ವಧಾಖ್ಯರೂಪದಿ
ಮಹಿಜ ಫಲತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ ||೧೧||
ಅನ್ನನೆನಿಸುವ ನೃಪಶುಗಳಿಗೆ ಹಿ
ರಣ್ಯಗರ್ಭಾಂಡದೊಳು ಸಂತತ
ತನ್ನನೀಪರಿಯಿಂದುಪಾಸನೆಗೈವ ಭಕುತರನ
ಬನ್ನ ಬಡಿಸದೆ ಭವಸಮುದ್ರ ಮ
ಹೋನ್ನತಿಯ ದಾಟಿಸಿ ಚತುರ್ವಿಧ
ಅನ್ನಮಯನಾತ್ಮಪ್ರದರ್ಶನ ಸುಖವನೀವ ಹರಿ ||೧೨||
ಮನವಚನಕಾಯಗಳ ದೆಶೆಯಿಂ
ದನುದಿನದಿ ಬಿಡದಾಚರಿಸುತಿ
ಪ್ಪನುಚಿತೋಚಿತ ಕರ್ಮಗಳ ಸದ್ಭಕ್ತಿಪೂರ್ವಕದಿ
ಅನಿಲದೇವನೊಳಿಪ್ಪ ನಾರಾ
ಯಣಗಿದನ್ನವು ಎಂದು ಕೃಷ್ಣಾರ್ಪಣವೆನುತ
ಕೊಡೆ ಸ್ವೀಕರಿಸಿ ಸಂತೈಪ ಕರುಣಾಳು ||೧೩||
ಏಳುವಿಧದನ್ನ ಪ್ರಕರಣವ
ಕೇಳಿ ಕೋವಿದರಾಸ್ಯದಿಂದಲಿ
ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ
ಕಾಲಕಾಲದಿ ನೆನೆದು ಪೂಜಿಸು
ಸ್ಥೂಲಮತಿಗಳಿಗಿದನು ಪೇಳದೆ
ಶ್ರೀಲಕುಮಿವಲ್ಲಭನೆ ಅನ್ನಾದನ್ನ ಅನ್ನದನು ||೧೪||
ಎಂದರಿತು ಸಪ್ತಾನ್ನಗಳ ದೈ
ನಂದಿನದಿ ಮರೆಯದೆ ಸದಾ ಗೋ
ವಿಂದಗರ್ಪಿಸು ನಿರ್ಭಯದಿ ಮಹಾಯಜ್ಞವಿದುಯೆಂದು
ಇಂದಿರೇಶನು ಸ್ವೀಕರಿಸಿ ದಯ
ದಿಂದ ಬೇಡಿಸಿಕೊಳದೆ ತವಕದಿ
ತಂದುಕೊಡುವನು ಪರಮಮಂಗಳ ತನ್ನ ದಾಸರಿಗೆ ||೧೫||
ಸೂಜಿ ಕರದಲಿ ಪಿಡಿದು ಸಮರವ
ನಾ ಜಯಿಸುವೆನು ಎಂಬ ನರನಂ
ತೀ ಜಗತ್ತಿನೊಳುಳ್ಳ ಅಜ್ಞಾನಿಗಳು ನಿತ್ಯದಲಿ
ಶ್ರೀ ಜಗತ್ಪತಿ ಚರಣಯುಗಳಸ
ರೋಜ ಭಕ್ತಿಜ್ಞಾನಪೂರ್ವಕ
ಪೂಜಿಸದೆ ಧರ್ಮಾರ್ಥಕಾಮವ ಬಯಸಿ ಬಳಲುವರು ||೧೬||
ಶಕಟಭಂಜನ ಸಕಲಜೀವರ
ನಿಕಟಗನು ತಾನಾಗಿ ಲೋಕಕೆ
ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ
ಅಕುಟಿಲಾತ್ಮಕ ಭಕುತಜನರಿಗೆ
ಸುಖದನೆನಿಸುವ ಸರ್ವಕಾಲದಿ
ಅಕಟಕಟ ಈತನ ಮಹಾಮಹಿಮೆಗಳಿಗೇನೆಂಬೆ ||೧೭||
ಶ್ರೀಲಕುಮಿವಲ್ಲಭನು ವೈಕುಂ
ಠಾಲಯದಿ ಪ್ರಣವ ಪ್ರಕೃತಿ ಕೀ
ಲಾಲಜಾಸನಮುಖ್ಯ ಚೇತನರೊಳಗೆ ನೆಲೆಸಿದ್ದು
ಮೂಲಕಾರಣ ಅಂಶಿನಾಮದಿ
ಲೀಲೆಗೈಸುತ ತೋರಿಕೊಳ್ಳದೆ
ಪಾಲಿನೊಳು ಘೃತವಿದ್ದತೆರದಂತಿಪ್ಪ ತ್ರಿಸ್ಥಳದಿ ||೧೮||
ಮೂರುಯುಗದಲಿ ಮೂಲರೂಪನು
ಸೂರಿಗಳ ಸಂತೈಸಿ ದಿತಿಯಕು
ಮಾರಕರ ಸಂಹರಿಸಿ ಧರ್ಮವನುಳುಹಬೇಕೆಂದು
ಕಾರುಣಿಕ ಭೂಮಿಯೊಳು ನಿಜಪರಿ
ವಾರಸಹಿತವತರಿಸಿ ಬಹುವಿಧ
ತೋರಿದನು ನರವತ್ಪ್ರವೃತ್ತಿಯ ಸಕಲಚೇತನಕೆ ||೧೯||
ಕಾರಣಾಹ್ವಯ ಪ್ರಕೃತಿಯೊಳಗಿ
ದ್ದಾರಧಿಕ ಹದಿನೆಂಟು ತತ್ತ್ವವ
ತಾ ರಚಿಸಿ ತದ್ರೂಪ ತನ್ನಾಮಂಗಳನೆ ಧರಿಸಿ
ನೀರಜ ಭವಾಂಡವನು ನಿರ್ಮಿಸಿ
ಕಾರುಣಿಕ ಕಾರ್ಯಾಖ್ಯ ರೂಪದಿ
ತೋರುವನು ಸಹಜಾಹಿತಾಚಲಗಳಲಿ ಪ್ರತಿದಿನದಿ ||೨೦||
ಜೀವರಂತರ್ಯಾಮಿ ಅಂಶಿ ಕ
ಳೇವರಗಳೊಳಗಿಂದ್ರಿಯಗಳಲಿ
ತಾ ವಿಹಾರವ ಗೈವುತನುದಿನ ಅಂಶನಾಮದಲಿ
ಈ ವಿಷಯಗಳನುಂಡು ಸುಖಮಯ
ಈವ ಸುಖ ಸಂಸಾರದುಃಖವ
ದೇವಮಾನವದಾನವರಿಗವಿರತ ಸುಧಾಮಸಖ ||೨೧||
ದೇಶದೇಶವ ಸುತ್ತಿ ದೇಹಾ
ಯಾಸಗೊಳಿಸದೆ ಕಾಮ್ಯಕರ್ಮ ದು
ರಾಶೆಗೊಳಗಾಗದಲೆ ಬ್ರಹ್ಮಾದ್ಯಖಿಳ ಚೇತನರು
ಭೂ ಸಲಿಲ ಪಾವಕ ಸಮೀರಾ
ಕಾಶ ಮೊದಲಾದಖಿಳ ತತ್ತ್ವ ಪ
ರೇಶಗಿವಧಿಷ್ಠಾನವೆಂದರಿತರ್ಚಿಸನವರತ ||೨೨||
ಎರಡು ವಿಧದಲಿ ಲೋಕದೊಳು ಜೀ
ವರುಗಳಿಪ್ಪರು ಸಂತತ ಕ್ಷರಾ
ಕ್ಷರ ವಿಲಿಂಗ ಸಲಿಂಗ ಸೃಜ್ಯಾಸೃಜ್ಯ ಭೇದದಲಿ
ಕರೆಸುವುದು ಜಡಪ್ರಕೃತಿ ಪ್ರಣವಾ
ಕ್ಷರ ಮಹದಣುಕಾಲನಾಮದಿ
ಹರಿಸಹಿತ ಭೇದಗಳಪಂಚಕ ಸ್ಮರಿಸು ಸರ್ವತ್ರ ||೨೩||
ಜೀವಜೀವರ ಭೇದ ಜಡಜಡ
ಜೀವಜಡಗಳ ಭೇದ ಪರಮನು
ಜೀವಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ
ಈ ವಿರಿಂಚಾಂಡದಲಿ ಎಲ್ಲಾ
ಠಾವಿನಲಿ ತಿಳಿದೈದು ಭೇದ ಕ
ಳೇವರದೊಳರಿತಚ್ಯುತನ ಪದ ಐದು ಶೀಘ್ರದಲಿ ||೨೪||
ಆದಿಯಲ್ಲಿ ಕ್ಷರಾಕ್ಷರಾಖ್ಯ
ದ್ವೇವಿಧಕ್ಷರದೊಳು ರಮಾ ಮಧು
ಸೂದನರು ಕ್ಷರಗಳೊಳು ಪ್ರಕೃತಿ ಪ್ರಣವಕಾಲಗಳು
ವೇದಮುಖ್ಯ ತೃಣಾಂತಜೀವರ
ಭೇದಗಳನರಿತೀ ರಹಸ್ಯವ
ಭೋದಿಸದೆ ಮಂದರಿಗೆ ಸರ್ವತ್ರದಲಿ ಚಿಂತಿಪುದು ||೨೫||
ದೀಪದಿಂ ದೀಪಗಳು ಪೊರಮ
ಟ್ಟಾಪಣಾಲಯಗತ ತಿಮಿರಗಳ
ತಾ ಪರಿಹರಗೈಸಿ ತದ್ಗತ ಪದಾರ್ಥ ತೋರ್ಪಂತೆ
ಸೌಪರಣಿ ವರವಹನ ತಾ ಬಹು
ರೂಪನಾಮದಿ ಎಲ್ಲ ಕಡೆಯಲಿ
ವ್ಯಾಪಿಸಿದ್ದು ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ ||೨೬||
ನಳಿನಮಿತ್ರಗೆ ಇಂದ್ರಧನು ಪ್ರತಿ
ಫಲಿಸುವಂತೆ ಜಗತ್ರಯವು ಕಂ
ಗೊಳಿಪುದನುಪಾಧಿಯಲಿ ಪ್ರತಿಬಿಂಬಾಹ್ವಯದಿ ಹರಿಗೆ
ತಿಳಿಯೆ ತ್ರಿಕಕುದ್ಧಾಮನತಿಮಂ
ಗಳ ಸುರೂಪವ ಸರ್ವಠಾವಿಲಿ
ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದ ಪೋಷಕನು ||೨೭||
ರಸ ವಿಶೇಷದೊಳತಿವಿಮಲಾ ಸಿತ
ವಸನ ತೋಯಿಸಿ ಅಗ್ನಿಯೊಳಗಿಡೆ
ಪಸರಿಸುವುದು ಪ್ರಕಾಶ ನಸುಗುಂದದಲೆ ಸರ್ವತ್ರ
ತ್ರಿಶಿರದೂಷಣವೈರಿ ಭಕ್ತಿ ಸು
ರಸದಿ ತೋಯ್ದ ಮಹಾತ್ಮರನು ಬಾ
ಧಿಸವು ಭವದೊಳಗಿದ್ದರೆಯು ಸರಿ ದುರಿತರಾಶಿಗಳು ||೨೮||
ವಾರಿನಿಧಿಯೊಳಗಖಿಳ ನದಿಗಳು
ಬೇರೆ ಬೇರೆ ನಿರಂತರದಲಿ ವಿ
ಹಾರಗೈವುತ ಪರಮಮೋದದಲಿಪ್ಪ ತೆರದಂತೆ
ಮೂರು ಗುಣಗಳ ಮಾನಿಯೆನಿಸುವ
ಶ್ರೀ ರಮಾರೂಪಗಳು ಹರಿಯಲಿ
ತೋರುತಿಪ್ಪವು ಸರ್ವಕಾಲದಿ ಸಮರಹಿತವೆನಿಸಿ ||೨೯||
ಕೋಕನದಸಖನುದಯ ಘೂಕಾ
ಲೋಕನಕೆ ಸೊಗಸದಿರೆ ಭಾಸ್ಕರ
ತಾ ಕಳಂಕನೆ ಈ ಕೃತೀಪತಿ ಜಗನ್ನಾಥನಿರೆ
ಸ್ವೀಕರಿಸಿ ಸುಖಬಡಲರಿಯದವಿ
ವೇಕಿಗಳು ನಿಂದಿಸಿದರೇನಹು
ದೀ ಕವಿತ್ವವ ಕೇಳಿ ಸುಖಬಡದಿಹರೆ ಕೋವಿದರು ||೩೦||
ಚೇತನಾಚೇತನಗಳಲಿ ಗುರು
ಮಾತರಿಶ್ವಾಂತರ್ಗತ ಜಗ
ನ್ನಾಥ ವಿಠಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳದೆ
ಕಾತುರವ ಪುಟ್ಟಿಸಿ ವಿಷಯದಲಿ
ಯಾತುಧಾನರ ಮೋಹಿಸುವ ನಿ
ರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ ||೩೧||
ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ ||
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||
Pitrugana Sandhi
harikathAmRutasAra gurugaLa karuNadiMdApanitu kELuve
parama BagavadBaktaridanAdaradi kELuvudu||
kRutiramaNa pradyumna vasudE
vategaLahaMkAratrayadoLu
caturaviMSati rUpadiMdali BOjyanenisuvanu
hutavahAkSha aMtargata jayA
patiyu tAnE mUradhika triM
Sati surUpadi BOktRuyenisuva BOktRugaLoLiddu ||1||
AradhikamUvatturUpadi
vArijAptanoLirutihanu mA
yAramaNa SrI vAsudEvanu kAlanAmadali
mUruvidha pitRugaLoLu vasu tripu
rAriyAdityaganiruddhanu
tOrikoLLade kartRukarma kriyanenisikoMba ||2||
svavaSa nArAyaNanu tA Sha
NNavati nAmadi karesutali vasu
Siva divAkara kartRu karma kriyegaLoLagiddu
nevanavillade nityadali ta
nnavaru mADuva sEve kaikoM
Davara pitRugaLigIvanaMtAnaMta suKagaLanu ||3||
taMtu paTadaMdadali lakumI
kAMta paMcAtmakanenisi vasu
kaMtuhara ravi kartRugaLoLiddanavarata tanna
ciMtisuva saMtaranu guru ma
dhvAMtarAtmaka saMtayisuvanu
saMtataKiLArthagaLa pAlisi ihaparaMgaLali ||4||
taMdetAygaLa prItigOsuga
niMdya karmava toredu vihitaga
LoMdu mIrade sAMgakarmagaLAcarisuvavaru
vaMdanIyarAgiLeyoLage dai
naMdinadi daiSika dahika suKa
diMda bALvaru bahu divasadali kIrtiyutarAgi ||5||
aMSi aMSaaMtargatatraya
haMsavAhana muKyadivijara
saaMSadali tiLidaMtarAtmaka SrI janArdanana
saMsmaraNe pUrvakadi ShaDadhika
triMSatitrayarUpavaritu vi
pAMsagana pUjisuvaravare kRutArtharenisuvaru ||6||
mUruvare sAvirada mElare
nUraidu rUpadi janArdana
sUrigaLu mADuva samArAdhanege viGnagaLu
bAradaMte bahuprakAra Ka
rAri kApADuvanu sarva Sa
rIragaLoLiddavaravara pesariMda karesutali ||7||
jaya jaya jayAkAMta dattA
trEya kapila mahidAsa Bakta
priya purAtana puruSha pUrNAnaMda j~jAnaGana
hayavadana hari haMsa lOka
traya vilakShaNa niKiLajagadA
Sraya nirAmaya dayadi saMtaiseMdu prArthipudu ||8||
ShaNNavatiyeMbakSharEDyanu
ShaNNavati nAmadali karesuta
tannavaru sadBakti pUrvakadiMda mADutiha
puNya karmava svIkarisi kA
ruNya sAgara salahuvanu bra
hmaNyadEva BavAbdhipOta bahuprakAradali ||9||
dEhagaLa koDuvavanu avarava
raharavanu koDadihane sumanasa
mahita maMgaLa carita sadguNaBaritananavarata
ahikapAratrikasuKaprada
vahisi bennili beTTavamRutava
druhiNa modalAdamarariguNisida muridanahitarana ||10||
druhiNa modalAdamararige sa
nmahita mAyAramaNa tAnE
svahanenisi saMtRuptibaDisuva sarvakAladali
prahita saMkaruShaNanu pitRugaLi
gaharanenipa svadhAKyarUpadi
mahija PalatRuNa pesarinali pradyumna aniruddha ||11||
annanenisuva nRupaSugaLige hi
raNyagarBAMDadoLu saMtata
tannanIpariyiMdupAsanegaiva Bakutarana
banna baDisade Bavasamudra ma
hOnnatiya dATisi caturvidha
annamayanAtmapradarSana suKavanIva hari ||12||
manavacanakAyagaLa deSeyiM
danudinadi biDadAcarisuti
ppanucitOcita karmagaLa sadBaktipUrvakadi
aniladEvanoLippa nArA
yaNagidannavu eMdu kRuShNArpaNavenuta
koDe svIkarisi saMtaipa karuNALu ||13||
ELuvidhadanna prakaraNava
kELi kOvidarAsyadiMdali
Alasava mADadale aniruddhAdi rUpagaLa
kAlakAladi nenedu pUjisu
sthUlamatigaLigidanu pELade
SrIlakumivallaBane annAdanna annadanu ||14||
eMdaritu saptAnnagaLa dai
naMdinadi mareyade sadA gO
viMdagarpisu nirBayadi mahAyaj~javiduyeMdu
iMdirESanu svIkarisi daya
diMda bEDisikoLade tavakadi
taMdukoDuvanu paramamaMgaLa tanna dAsarige ||15||
sUji karadali piDidu samarava
nA jayisuvenu eMba naranaM
tI jagattinoLuLLa aj~jAnigaLu nityadali
SrI jagatpati caraNayugaLasa
rOja Baktij~jAnapUrvaka
pUjisade dharmArthakAmava bayasi baLaluvaru ||16||
SakaTaBaMjana sakalajIvara
nikaTaganu tAnAgi lOkake
prakaTanAgade sakala karmava mADi mADisuta
akuTilAtmaka Bakutajanarige
suKadanenisuva sarvakAladi
akaTakaTa Itana mahAmahimegaLigEneMbe ||17||
SrIlakumivallaBanu vaikuM
ThAlayadi praNava prakRuti kI
lAlajAsanamuKya cEtanaroLage nelesiddu
mUlakAraNa aMshinAmadi
lIlegaisuta tOrikoLLade
pAlinoLu GRutaviddateradaMtippa tristhaLadi ||18||
mUruyugadali mUlarUpanu
sUrigaLa saMtaisi ditiyaku
mArakara saMharisi dharmavanuLuhabEkeMdu
kAruNika BUmiyoLu nijapari
vArasahitavatarisi bahuvidha
tOridanu naravatpravRuttiya sakalacEtanake ||19||
kAraNAhvaya prakRutiyoLagi
ddAradhika hadineMTu tattvava
tA racisi tadrUpa tannAmaMgaLane dharisi
nIraja BavAMDavanu nirmisi
kAruNika kAryAKya rUpadi
tOruvanu sahajAhitAcalagaLali pratidinadi ||20||
jIvaraMtaryAmi aMSi ka
LEvaragaLoLagiMdriyagaLali
tA vihArava gaivutanudina aMSanAmadali
I viShayagaLanuMDu suKamaya
Iva suKa saMsAraduHKava
dEvamAnavadAnavarigavirata sudhAmasaKa ||21||
dESadESava sutti dEhA
yAsagoLisade kAmyakarma du
rASegoLagAgadale brahmAdyaKiLa cEtanaru
BU salila pAvaka samIrA
kASa modalAdaKiLa tattva pa
rESagivadhiShThAnaveMdaritarcisanavarata ||22||
eraDu vidhadali lOkadoLu jI
varugaLipparu saMtata kSharaa
kShara viliMga saliMga sRujyaasRujya BEdadali
karesuvudu jaDaprakRuti praNavA
kShara mahadaNukAlanAmadi
harisahita BEdagaLapaMcaka smarisu sarvatra ||23||
jIvajIvara BEda jaDajaDa
jIvajaDagaLa BEda paramanu
jIvajaDa suvilakShaNanu eMdaridu nityadali
I viriMcaaMDadali ellA
ThAvinali tiLidaidu BEda ka
LEvaradoLaritacyutana pada aidu SIGradali ||24||
Adiyalli kSharAkSharAKya
dvEvidhakSharadoLu ramA madhu
sUdanaru kSharagaLoLu prakRuti praNavakAlagaLu
vEdamuKya tRuNAMtajIvara
BEdagaLanaritI rahasyava
BOdisade maMdarige sarvatradali ciMtipudu ||25||
dIpadiM dIpagaLu porama
TTApaNAlayagata timiragaLa
tA pariharagaisi tadgata padArtha tOrpaMte
sauparaNi varavahana tA bahu
rUpanAmadi ella kaDeyali
vyApisiddu yathEShTa mahimeya tOrpa tiLisadale ||26||
naLinamitrage iMdradhanu prati
PalisuvaMte jagatrayavu kaM
goLipudanupAdhiyali pratibiMbaahvayadi harige
tiLiye trikakuddhAmanatimaM
gaLa surUpava sarvaThAvili
poLeva hRudayake pratidivasa prahlAda pOShakanu ||27||
rasa viSEShadoLativimalA sita
vasana tOyisi agniyoLagiDe
pasarisuvudu prakASa nasuguMdadale sarvatra
triSiradUShaNavairi Bakti su
rasadi tOyda mahAtmaranu baa
dhisavu BavadoLagiddareyu sari duritarASigaLu ||28||
vArinidhiyoLagaKiLa nadigaLu
bEre bEre niraMtaradali vi
hAragaivuta paramamOdadalippa teradaMte
mUru guNagaLa mAniyenisuva
SrI ramArUpagaLu hariyali
tOrutippavu sarvakAladi samarahitavenisi ||29||
kOkanadasaKanudaya GUkA
lOkanake sogasadire BAskara
tA kaLaMkane I kRutIpati jagannAthanire
svIkarisi suKabaDalariyadavi
vEkigaLu niMdisidarEnahu
dI kavitvava kELi suKabaDadihare kOvidaru ||30||
cEtanAcEtanagaLali guru
mAtariSvAMtargata jaga
nnAtha viThala niraMtaradi vyApisi tiLisikoLade
kAturava puTTisi viShayadali
yaatudhAnara mOhisuva ni
rBIta nityAnaMdamaya nirdOSha niravadya ||31||
harikathAmRutasAra gurugaLa |
karuNadiMdApanitu pELuve ||
parama BagavadBaktaridanAdaradi kELuvudu ||