ಹರಿದಾಸ ಚತುಷ್ಟಯ ಪುರುಷ ತೃತೀಯರಾದ
ತುರುಪಾಲ ದಾಸರ ಚರಿತೆ ತಿಳಿದಷ್ಟು
ಬರೆಯುವೆ ಶಿರಿ ಹರಿ ಮರುತರ ದಯದಿಂದ
ಗುರು ವರದೇಂದ್ರರ ಪರಮಾನುಗ್ರಹದಿಂದ
ವರದೇಶದಾಸರ ಕರುಣದಿಂದ
ಮುರಹರನಾಜ್ಞದಿ ಕರಿಕಂಧರಿಯೊಳು
ಪುರ ದಧಿಶಿಲೆಯಲ್ಲಿ ಪುಟ್ಟಿ
ಪರ ಶುಕ್ಲನಂತೆ ಬೆಳೆದ ಭಾಗಣ್ಣನು
ದುರುಳ ಭಾಗದೇಯಾರು ಚರಚರಾಸ್ತಿಯನಪ
ಹರಿಸಿ ದೂಡಲು ಬಂದು ಸಂಕಾಪುರದಿ
ಮರುತದೇವನ ಆಶ್ರಯದಲ್ಲಿ ನೆಲೆಸಿಹ
ಶಿರಿವರ ಅಭಿನವ ಪ್ರಾಣೇಶವಿಠ್ಠಲನ ದಯದಿ ||೧||
ಗಾಯತ್ರೀ ಮಂತ್ರ ಪುನಶ್ಚರಣೆಯಲ್ಲಿ
ತಾಯಿಯ ಒಲಿಸಿದನು ಮೌನ ತಪಸಿನಲಿ
ಬೀಯ ಮಾಡುತಲೊಬ್ಬ ಮರಳುವ ನೀರೆರೆಯೆ
ಘಾಯಗೊಂಡು ತಾನೆ ಬಹುಪರಿ ಬಳಲಿದನು
ವಾಯುಭಕ್ಷನೊಮ್ಮೆ ಶಿರದಲಿ ಫಣವಿರಿಸೆ
ಕಾಯವ ಸುತ್ತಿರಲು ಕಂಡು ಜನರು ಬೆದರೆ
ತೋಯಜಾಕ್ಷ ಅಭಿನವ ಪ್ರಾಣೇಶವಿಠ್ಠಲನ
ಪ್ರೀಯ ದಾಸರಿಗುಂಟೆ ನೋವು ಭಯವು ||೨||
ಪೃಥ್ವಿಪನರಿಕೆಯನಾಲಿಸಿ ಬೇಗನೆ
ಉತ್ತನೂರಿಗೆ ಬಂದು ನೆಲೆಸಿದನು
ಚಿತ್ತಜನಯ್ಯನ ಗಿರಿ ವೆಂಕಟೇಶನ
ತುತಿಸುತಾಕ್ಷಣ ಸೇವೆಗೈಯುತಲಿ
ನಿತ್ಯ ಜನರಿಗೆ ಭವಿಷ್ಯವ ಪೇಳುತ್ತ
ಸತ್ಯ ಕಥಾಮೃತ ಸುರಿಸುತಲಿ
ಭೃತ್ಯರಿಗುಣಿಸುತ್ತ ಅವರ ಮನ ತಣಿಸುತ್ತ
ನಿತ್ಯನೂತನ ಮಹಿಮೆ ತೋರುತಲಿ
ಹತ್ತಿ ಕುದುರೆಯ ಬಂದು ಅಲೆನಾಹಿ ಎಂದು
ಕತ್ತುರಿ ಚಲುವನ ಅಣತಿಯಂತೆ
ತೆತ್ತಿಗರೊಡನೆ ಪಂಢರಪುರವ ಕಂಡು ಯಜಿಸಿ
ಉತ್ತರ ದೇಶದ ಯಾತ್ರೆಯ ಸಮಯದೀ
ಸೋತ್ತಮ ಗುರುಗಳ ಕಂಡು ನಮಿಸಿ
ಸೋತ್ತಮ ಭೃಗುಮುನಿ ವಿಜಯದಾಸರ ಒಲಿಸಿ
ತುತಿಸಿ ಉಪದೇಶಾಂತರವ ಗ್ರಹಿಸಿ
ಸತ್ಯ ಗೋಪಾಲವಿಠಲ ದಾಸರಾದರು
ಸತ್ಯಾಭಿನವ ಪ್ರಾಣೇಶವಿಠ್ಠಲನ ದಯದಿ ||೩||
ಹರಿದಾಸರು ನಿತ್ಯ ಹರಿ ಮತ ದರ್ಶನ
ಪ್ರಮೇಯ ಪ್ರಮಾಣ ವಾಕ್ಯಗಳೆಲ್ಲವ
ಸರಸವಾದ ಕನ್ನಡ ನುಡಿಯಲ್ಲಿ ಪದ್ಯ
ವರ ಸುಳಾದಿಗಳಿಂದ ಅರುಹುತ ಸಂತತ
ಪರಮ ಭಾಗವತ ಧರ್ಮವ ಬೀರುತ್ತ
ಹರಿದಾಸ್ಯ ಪಥವನ್ನು ತೋರುತ್ತ ಸಾರುತ್ತ
ಹರಿಕಥಾ ರಸ ಸುಧೆ ಸುರಿಸಿ ಭೂಸುರ ಪಾ
ಮರ ಜನರಿಗೆ ಗೈದ ಉಪಕಾರಕ್ಕೆಣೆಗಾಣೆ
ಭರತ ಖಂಡವನೆಲ್ಲಾ ಚರಿಸಿ ಆನತರನು
ದ್ಧರಿಸಿದ ಕರುಣಾಳು ಗೋಪಾಲದಾಸರೇ
ಶರಣೆಂಬೆ ಶರಣೆಂಬೆ ನಿಮ್ಮಯ ಚರಣಕ್ಕೆ
ತುರುಪಾಲ ದಾಸರ ಹರಿಕಥಾ ಸಮಯದಿ
ಪರಿಸರದೇವನು ತರುಚರ ರೂಪದಿ
ವರ ರೌಪ್ಯಪೀಠದಿ ಶೋಭಿಪ ನಿತ್ಯದಿ
ಧರಿಸುರ ರೈಜಿಯರೊಮ್ಮೆ ಕಂಡಿರುವರು
ತಿರಲಿಂಗ ದೇಶದ ಮಾಯಿಯ ಜೈಸಿದ
ನರತುತಿ ಮಾಡದಿರೆಂದ್ಹೇಳಿ ಕಳಿಸಿದ
ಗುರುಗಳ ವಿಜಯರ ಚರಣಾರಾಧನೆಯಿಂದ
ಉರಗ ಪರ್ವತದಲ್ಲಿ ಧರಿನಾಥರಿಗೆ ತಮ್ಮ
ಶರಕರಿ ವತ್ಸರ ಆಯುಷ್ಯವೆರೆದರು
ಪರಮ ಸುತ್ಯಾಗಕ್ಕೆ ಕರ್ಣ ತಲೆ ಬಾಗಿದ
ತುರುಪಾಲದಾಸರ ಚರಿತೆಗೆ ನಮೋ ನಮೋ
ತುರುಪಾಲಾಭಿನವ ಪ್ರಾಣೇಶವಿಠ್ಠಲನ
ಚರಣ ಕಿಂಕರನೆನಿಸಿ ಮೆರೆದ ಗುರುದೇವ ||೪||
ದಾಸರ ಮಾತಿನ ಮರ್ಮವನರಿಯುತ
ಭೂಸುರ ರೈಜಿಯ ರಾಮಾಚಾರ್ಯರು
ಕಾಷಾಯಾಂಬರ ಧರಿಸುತ ಬಿಂಬೋ
ಪಾಸನೆ ಗೈದಪರೋಕ್ಷವ ಪಡೆದರು
ದಾಸರ ಸಂಗಡ ನರ್ತಿಸಿ ನಲಿದರು
ವಾಸುದೇವ ವಿಟ್ಠಲನ ಭಜಿಸಿದರು
ವಾಸುದೇವ ಹರಿ ರೂಪವ ಕಂಡರು
ತೋಷದಿ ನಲಿದರು ತೃಪ್ತಿಯ ಪಡೆಯುತ
ಪಾಶಮಂಥದರ ದೇವನ ಕಾಣಲು
ದಾಸರು ಹೊರಟರು ಉಡುಪಿಯ ಯಾತ್ರೆಗೆ
ದೋಷ ಮಂಡಗದ್ದಿ ತಸ್ಕರ ಭೀಮನು
ಆ ಸುಯಾತ್ರಿಕರ ಸುಲಿಯಲು ಬರೆ
ಪ್ರಾಣೇಶನ ದಯದಿಂದ ರಕ್ಷಿಸಿ ವುಳುಹಿದ
ಶೇಷಾನುಜ ಗೋಪಾಲಮೂರ್ತಿಯನು
ತೋಷದಿ ವಂದಿಸಿ ಸೇವೆಯ ಸಲ್ಲಿಸಿ
ದೇಶಿಕರಿಷ್ಟರ ದರ್ಶನ ಪಡೆಯುತ
ರಾಶಿ ಜಲದ ಸ್ನಾನವ ಪೂರೈಸುತ
ವಾಸುದೇವ ಪುರ ಯಾತ್ರೆಯ ಗೈಯುತ
ಭಾಸುರ ಚರಿತರು ಮರಳುತ ಬಂದರು
ದೇಶಿಕ ವರ ಮಂತ್ರಾಲಯ ಪ್ರಭುಗಳ
ಮೀಸಲಪ್ಪಣೆಯ ಮೇರೆಗೆ ಗೌಡನ
ವಾಸಕೆ ಬಂದರು ಲಕ್ಷ ಭೋಜನದ
ಆಸೆ ಸಲ್ಲಿಸಿದರು ತೋಷವಗರೆದರು
ಶೇಷಗಿರೀಶನ ಕಂಡು ತುತಿಸಿದರು
ವಾಸಕೆ ತಿರುಗುತರೆಲ್ಲರ ಕರೆಸುತ
ಆ ಸಮೀರಮತ ಮರ್ಮವ ತಿಳಿಸುತ
ಕಾಶ್ಯಪ ಚಿತ್ರಾ ಮಕರಾಷ್ಟಮಿ ಪರ
ವಾಸರ ಮಂದದಿ ಲಯವನು ಚಿಂತಿಸಿ
ವಾಸುದೇವ ಮುರಮರ್ದನ ಕಳುಹಿದ
ಕಾ ಶಕಟನ್ನೇರುತ ನಡೆದರು
ಭೂಸುರ ಜನಗಣ ಜಯ ಘೋಷದವರ
ವಾಸವ ನಗರದ ದುಂದುಭಿ ಸುಸ್ವರ
ಆ ಸುಗಂಧ ಬೀರುವ ಸುಮ ವರ್ಷದಿ
ದಾಸರ ಮೇಳದ ಭಜನೆ ನರ್ತನದಿ
ಶ್ರೀಶಾಭಿನವ ಪ್ರಾಣೇಶವಿಠ್ಠಲನ ಪುರಕೆ ||೫||
ಜತೆ
ಗೋಪಾಲದಾಸರ ಚರಿತೆ ಪಠಿಸೆ ನಿತ್ಯ
ಗೋಪಾಭಿನವ ಪ್ರಾಣೇಶವಿಠಲ ಒಲಿವಾ||
haridaasa catuShTaya puruSha tRutIyaraada
turupaala daasara carite tiLidaShTu
bareyuve Siri hari marutara dayadiMda
guru varadEMdrara paramaanugrahadiMda
varadEshadaasara karuNadiMda
muraharanaaj~jadi karikaMdhariyoLu
pura dadhishileyalli puTTi
para SuklanaMte beLeda bhaagaNNanu
duruLa bhaagadEyaaru caracaraastiyanapa
harisi dUDalu baMdu saMkaapuradi
marutadEvana ASrayadalli nelesiha
Sirivara abhinava praaNESaviThThalana dayadi ||1||
gaayatrI maMtra punaScaraNeyalli
taayiya olisidanu mauna tapasinali
bIya maaDutalobba maraLuva nIrereye
GaayagoMDu taane bahupari baLalidanu
vaayubhakShanomme Siradali phaNavirise
kaayava suttiralu kaMDu janaru bedare
tOyajaakSha abhinava praaNESaviThThalana
prIya daasariguMTe nOvu bhayavu ||2||
pRuthvipanarikeyanaalisi bEgane
uttanUrige baMdu nelesidanu
cittajanayyana giri veMkaTESana
tutisutaakShaNa sEvegaiyutali
nitya janarige bhaviShyava pELutta
satya kathaamRuta surisutali
bhRutyariguNisutta avara mana taNisutta
nityanUtana mahime tOrutali
hatti kudureya baMdu alenaahi eMdu
katturi caluvana aNatiyaMte
tettigaroDane paMDharapurava kaMDu yajisi
uttara dESada yaatreya samayadI
sOttama gurugaLa kaMDu namisi
sOttama bhRugumuni vijayadaasara olisi
tutisi upadESaaMtarava grahisi
satya gOpaalaviThala daasaraadaru
satyaabhinava praaNESaviThThalana dayadi ||3||
haridaasaru nitya hari mata darSana
pramEya pramaaNa vaakyagaLellava
sarasavaada kannaDa nuDiyalli padya
vara suLaadigaLiMda aruhuta saMtata
parama bhaagavata dharmava bIrutta
haridaasya pathavannu tOrutta saarutta
harikathaa rasa sudhe surisi bhUsura paa
mara janarige gaida upakaarakkeNegaaNe
bharata KaMDavanellaa carisi aanataranu
ddharisida karuNaaLu gOpaaladaasarE
SaraNeMbe SaraNeMbe nimmaya caraNakke
turupaala daasara harikathaa samayadi
parisaradEvanu tarucara rUpadi
vara raupyapIThadi SObhipa nityadi
dharisura raijiyaromme kaMDiruvaru
tiraliMga dESada maayiya jaisida
naratuti maaDadireMd~hELi kaLisida
gurugaLa vijayara caraNaaraadhaneyiMda
uraga parvatadalli dharinaatharige tamma
Sarakari vatsara AyuShyaveredaru
parama sutyaagakke karNa tale baagida
turupaaladaasara caritege namO namO
turupaalaabhinava praaNESaviThThalana
caraNa kiMkaranenisi mereda gurudEva ||4||
daasara maatina marmavanariyuta
bhUsura raijiya raamaacaaryaru
kaaShaayaaMbara dharisuta biMbO
paasane gaidaparOkShava paDedaru
daasara saMgaDa nartisi nalidaru
vaasudEva viTThalana bhajisidaru
vaasudEva hari rUpava kaMDaru
tOShadi nalidaru tRuptiya paDeyuta
paaSamaMthadara dEvana kaaNalu
daasaru horaTaru uDupiya yaatrege
dOSha maMDagaddi taskara bhImanu
A suyaatrikara suliyalu bare
praaNESana dayadiMda rakShisi vuLuhida
SEShaanuja gOpaalamUrtiyanu
tOShadi vaMdisi sEveya sallisi
dESikariShTara darSana paDeyuta
raaSi jalada snaanava pUraisuta
vaasudEva pura yaatreya gaiyuta
bhaasura caritaru maraLuta baMdaru
dESika vara maMtraalaya prabhugaLa
mIsalappaNeya mErege gauDana
vaasake baMdaru lakSha bhOjanada
Ase sallisidaru tOShavagaredaru
SEShagirISana kaMDu tutisidaru
vaasake tirugutarellara karesuta
A samIramata marmava tiLisuta
kaaSyapa citraa makaraaShTami para
vaasara maMdadi layavanu ciMtisi
vaasudEva muramardana kaLuhida
kaa SakaTannEruta naDedaru
bhUsura janagaNa jaya GOShadavara
vaasava nagarada duMdubhi susvara
A sugaMdha bIruva suma varShadi
daasara mELada bhajane nartanadi
SrISaabhinava praaNESaviThThalana purake ||5||
jate
gOpaaladaasara charite paThise nitya
gOpaabhinava praaNEshaviThala olivaa||