ಧ್ರುವ ತಾಳ
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರವಾದ ಮಾಯಾವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ ಮಾಧವ
ವೇದವೇದ್ಯ ವಿಜಯವಿಠಲ ತಾನು ಆದರದಿಂದವರ
ಭುಜದಿ ಹಯವಕ್ತ್ರನಾಗಿ ಪಾದವನ್ನು ಇಟ್ಟು
ಸ್ವಾದುವಾದಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ||೧||
ಮಟ್ಟತಾಳ
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ್ಯ ಪಾಯಸ ಘೃತ ನೀಡೆ
ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿನಿಂದ
ಉಡುರಾಜಮುಖ ನಮ್ಮ ವಿಜಯವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||೨||
ತ್ರಿವಿಡತಾಳ
ತಾಮಸ ಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ
ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯವಿಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ||೩||
ಅಟ್ಟತಾಳ
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿಗ್ವಿಜಯ ಮಾಡಲು
ಪುರಕೆ ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜನ ಪದಕೆ ಬಂದು ಅಖಿಳರನಾಳಿದಾ
ನಿಜವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠಲನ್ನ
ಭಜನೆಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ ನಿಜ ನಿರ್ಮಲ ಸುಜ್ಞಾನ
ಧ್ಯಾನದಿಂದ ಜ್ಞಾನಪಕ್ವಾದ ಮನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ ನಿಜವಾಗಿ ಬೊಮ್ಮಾಂಡ
ಪುರಾಣ ಸಾಧಕರಿಂದ ಅಜಪದಕೆ ಸಲ್ವನು ಲೇಶ
ಸಂಶಯಬೇಡಿ ನಿಜ ನಿಜ ನಿಜವೆಂದು ನಿತ್ಯ ಕೊಂಡಾಡಿರೊ ||೪||
ಆದಿ ತಾಳ
ಮನ ಶುದ್ದರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ
ವನಜಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿವಿಜಯವಿಠಲ ತಾನು
ಮುನಿ ವಾದಿರಾಜರ ಸಾಮಾನ್ಯರೆಂತೆಂದು ಎಣಿಸಿದವರನ್ನು
ಘನವಾಗಿ ಶಿಕ್ಷಿಪ ಇನತನೋದ್ಭವ ಕೋಪದಿಂದ
ವಾದಿರಾಜರ ಮಹಿಮೆಯನು ಕೊಂಡಾಡಿ ಅನುದಿನ ಸುಜನರು ||೫||
ಜತೆ
ಮೋದತೀರ್ಥರ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲ ದಾಸಾ
dhruva taaLa
maadhavanaMGri nitya mOdadalli bhajipa
saadhu sanmunivarya sammOdatIrthara paada
saadaradiMda bhajisi mEdinige bhaaravaada maayaavaadigaLa gedda
vaadiraajara mahime varNisalaLavallaa maadhava
vEdavEdya vijayaviThala taanu aadaradiMdavara
bhujadi hayavaktranaagi paadavannu iTTu
svaaduvaadakaDali hUraNavanu uMDa
shrIdharana mahime saadhujanaru kELi ||1||
maTTataaLa
kaDalalli pavaDisida oDiya taa poDaviyali
mRuDanuta gOviMda jaDithad~harivaaNadalli
kaDali sakkare beresi laDDugeya maaDida
saDagarada bhakShya paayasa GRuta nIDe
oDiyanu brahmaadi parivaara sahituMDu
kaDagOlu nENu piDiduDupiliniMda
uDuraajamukha namma vijayaviThThalanu
beDagu kaaryavannu naDesida bage kELi ||2||
triviDataaLa
taamasa guNavuLLa paamara janarige
I mahime dorakuvudE svaami silakuvane
kaamisi kOTi varuSha naama nuDiye paraM
dhaama doriyadu bhUmiyoLagidda bhraamaka janarige
vaamadEvane hiriyaneMdu buddhiya koDuva
kaamaari vaMdya namma vijayaviThalanu
saamaanya janarige dorakuvane kELi ||3||
aTTataaLa
aja satyalOkaadhipatyavannu maaDi digvijaya maaDalu
purake nija suj~jAna pUrNapraj~jareMbO muniyu
ajana padake baMdu akhiLaranaaLidaa
nijavaayu hanuma bhIma madhvanenisida
vijayasaarathi paadarajada mahaatmeyiMda
gajavairi bhaMjana vijayaviThalanna
bhajaneya gaiyuta bahukaaladi
RujugaNa paMktiyoLage kuLitaa nija nirmala suj~jAna
dhyaanadiMda j~jaanapakvaada manavuLLa
sujana shirOmaNi vaadiraajanu taa nijavaagi bommaaMDa
puraaNa saadhakariMda ajapadake salvanu lEsha
saMshayabEDi nija nija nijaveMdu nitya koMDaaDiro ||4||
Adi taaLa
mana Suddaraagi maadhavanaMGriyanu
dina dinadalli naMbi koMDippare
anavarataanaMda guru madhvaraayara divya
vanajapaadaMgaLa smarisalu
hanumEsha namma sirivijayaviThala taanu
muni vaadiraajara saamaanyareMteMdu eNisidavarannu
Ganavaagi shikShipa inatanOdbhava kOpadiMda
vaadiraajara mahimeyanu koMDaaDi anudina sujanaru ||5||
jate
mOdatIrthara mata sEnaadhipatiyaada
vaadiraaja muniyu vijayaviThThala daasaa